ನವದೆಹಲಿ: ಆಮ್ ಆದ್ಮಿ ಪಾರ್ಟಿ (Aam Aadmi Party) ಮುಖಂಡ ಅರವಿಂದ್ ಕೇಜ್ರಿವಾಲ್ (Arvind Kejriwal) ದೆಹಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿರುವ ಬೆನ್ನಲ್ಲೇ ರಾಷ್ಟ್ರ ರಾಜಧಾನಿಯ ಹೊಸ ಸಿಎಂ ಯಾರೆಂಬ ಕುತೂಹಲ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಹೀಗಾಗಿ ಇಂದು ಮಧ್ಯಾಹ್ನ ಶಾಸಕಾಂಗ ಪಕ್ಷದ ಸಭೆ ಕರೆದಿರುವ ಆಪ್ ಇಂದೆ ಹೊಸ ಮುಖ್ಯಮಂತ್ರಿಯನ್ನು ಘೋಷಿಸಲಿದ್ದಾರೆ ಎನ್ನಲಾಗುತ್ತಿದೆ.
ಇಂದು ಮಧ್ಯಾಹ್ನ 12ಗಂಟೆಗೆ ಮುಖ್ಯಮಂತ್ರಿ ನಿವಾಸದಲ್ಲಿ ಸಭೆ ಕರೆದಿರುವ ಆಪ್ ನೂತನ ಸಿಎಂ ಯಾರಾಗಬಹುದೆಂಬ ಬಗ್ಗೆ ಮಹತ್ವ ನಿರ್ಧಾರ ತೆಗೆದುಕೊಳ‍್ಳಲಿದೆ. ಬಳಿಕ ಸಿಎಂ ಕೇಜ್ರಿವಾಲ್ ಸಂಜೆ 4:30ಕ್ಕೆ ಲೆಫ್ಟಿನೆಂಟ್ ವಿ.ಕೆ ಸಕ್ಸೇನಾ ಅವರನ್ನು ಭೇಟಿಯಾಗಿ ತಮ್ಮ ರಾಜೀನಾಮೆಯನ್ನು ಸಲ್ಲಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಭಾನುವಾರ, ಕೇಜ್ರಿವಾಲ್ ತಮ್ಮ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುವಾಗ ರಾಜೀನಾಮೆ ನೀಡುವ ನಿರ್ಧಾರ ಘೋಷಿಸಿದ್ದರು. “ನಾನು 2 ದಿನಗಳ ನಂತರ ರಾಜೀನಾಮೆ ನೀಡಲಿದ್ದೇನೆ. ನಾನು ಪ್ರಾಮಾಣಿಕನೇ ಎಂದು ಜನರನ್ನು ಕೇಳಿ. ಅವರು ಪ್ರತಿಕ್ರಿಯಿಸುವವರೆಗೂ ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ. ಜನರು ನನಗೆ ಪ್ರಾಮಾಣಿಕತೆಯ ಪ್ರಮಾಣಪತ್ರವನ್ನು ನೀಡಿದ ನಂತರವೇ ನಾನು ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತೇನೆ. ಜೈಲಿನಿಂದ ಹೊರಬಂದ ನಂತರ ‘ಅಗ್ನಿಪರೀಕ್ಷೆ’ಗೆ ಒಳಪಡಲು ಬಯಸುತ್ತೇನೆ” ಎಂದು ನಾಯಕ ಹೇಳಿದ್ದಾರೆ.
ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ಸಲ್ಲಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ಪಡೆದ ನಂತರ ದೆಹಲಿಯ ತಿಹಾರ್ ಜೈಲಿನಿಂದ ಹೊರಬಂದ ಎರಡು ದಿನಗಳ ನಂತರ ಕೇಜ್ರಿವಾಲ್ ಈ ಘೋಷಣೆ ಮಾಡಿದ್ದಾರೆ.
ಮುಂದಿನ ಸಿಎಂ ಯಾರು?
ಇನ್ನು ಕೇಜ್ರಿವಾಲ್ ರಾಜೀನಾಮೆಯಿಂದ ತೆರವುಗೊಂಡಿರುವ ಸಿಎಂ ಸ್ಥಾನವನ್ನು ತುಂಬುವ ಮುಂದಿನ ಸಮರ್ಥ ನಾಯಕರು ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಹಲವು ಪ್ರಮುಖ ಹೆಸರು ಚರ್ಚೆಯಲ್ಲಿದ್ದರೂ ಪಕ್ಷದಲ್ಲಿ ಅಲ್ಪಸಂಖ್ಯಾತ ವರ್ಗ ಮತ್ತು ಹಿಂದುಳಿದ ವರ್ಗಗಳ ಶಾಸಕರು ಹೆಚ್ಚಾಗಿ ಇರುವ ಕಾರಣ ಆ ಸಮುದಾಯದ ನಾಯಕರನ್ನೇ ಸಿಎಂ ಆಗಿ ನೇಮಿಸಬಹುದೆಂಬ ಚರ್ಚೆ ಎಲ್ಲೆಡೆ ಕೇಳಿ ಬರುತ್ತಿದೆ.
ದೆಹಲಿ ಸಚಿವರಾದ ಅತಿಶಿ, ಗೋಪಾಲ್ ರಾಯ್, ಕೈಲಾಶ್ ಗಹ್ಲೋಟ್ ಮತ್ತು ಸೌರಭ್ ಭಾರದ್ವಾಜ್ ಅವರ ಹೆಸರುಗಳು ಮತ್ತೆ ಮತ್ತೆ ಕೇಳಿ ಬರುತ್ತಿದೆ. ಮತ್ತೊಂದೆಡೆ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಹೆಸರು ಚಾಲ್ತಿಯಲ್ಲಿದೆ. ʼಇನ್ನೂ ಯಾವುದನ್ನೂ ನಿರ್ಧರಿಸಿಲ್ಲ. ಆದಾಗ್ಯೂ, ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಲು ಆಪ್ ಕೆಲವು ದಲಿತ ಅಥವಾ ಮುಸ್ಲಿಂ ಶಾಸಕರಿಗೆ ಮಣೆ ಹಾಕಬಹುದೆಂದುʼ ಪಕ್ಷದ ಅಧಿಕೃತ ಮೂಲವೊಂದು ತಿಳಿಸಿದೆ.
ಈ ಸುದ್ದಿಯನ್ನೂ ಓದಿ: Arvind Kejriwal : ಮಂಗಳವಾರ ಲೆಫ್ಟಿನೆಂಟ್ ಗವರ್ನರ್ ಭೇಟಿ ಮಾಡಲಿರುವ ಕೇಜ್ರಿವಾಲ್; ರಾಜೀನಾಮೆ ಸಾಧ್ಯತೆ