Thursday, 19th September 2024

Arvind Kejriwal: ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಘೋಷಿಸಿದ ಅರವಿಂದ್‌ ಕೇಜ್ರಿವಾಲ್‌

Arvind Kejriwal

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಎರಡು ದಿನಗಳ ಹಿಂದೆಯಷ್ಟೇ ತಿಹಾರ್‌ ಜೈಲಿನಿಂದ ಹೊರ ಬಂದಿರುವ ಆಮ್‌ ಆದ್ಮಿ ಪಾರ್ಟಿ (Aam Aadmi Party) ಮುಖಂಡ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರು ಇನ್ನೆರಡು ದಿನಗಳಲ್ಲಿ ದೆಹಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ದಿಲ್ಲಿ ಅಬಕಾರಿ ನೀತಿ ಭ್ರಷ್ಟಾಚಾರ ಪ್ರಕರಣದಲ್ಲಿ ಐದು ತಿಂಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ನೀಡಿತ್ತು.

ʼʼಮುಂಬರುವ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ನನ್ನ ಪ್ರಾಮಾಣಿಕತೆಯನ್ನು ಒಪ್ಪಿಕೊಂಡಾಗ ಮಾತ್ರ ಮುಖ್ಯಮಂತ್ರಿ ಹುದ್ದೆಯನ್ನು ಸ್ವೀಕರಿಸುತ್ತೇನೆ. ನಿರಪರಾಧಿತ್ವವನ್ನು ಸಾಬೀತುಪಡಿಸಲು ನಾವು ಜನರ ನ್ಯಾಯಾಲಯದ ಮೊರೆ ಹೋಗುತ್ತೇವೆ” ಎಂದು ಅವರು ಹೇಳಿದ್ದಾರೆ. 2025ರ ಫೆಬ್ರವರಿಯ ಬದಲು ಈ ವರ್ಷದ ನವೆಂಬರ್‌ನಲ್ಲೇ ಚುನಾವಣೆ ನಡೆಸಬೇಕು ಎಂದೂ ಅವರು ಈ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.

“ಸುಪ್ರೀಂ ಕೋರ್ಟ್ ವಿಧಿಸಿರುವ ನಿರ್ಬಂಧಗಳಿಂದಾಗಿ ನಾವು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎಂದು ಕೆಲವರು ಹೇಳುತ್ತಾರೆ. ಅವರು (ಬಿಜೆಪಿಯವರು) ಸಹ ನಮ್ಮ ಮೇಲೆ ನಿರ್ಬಂಧಗಳನ್ನು ಹೇರುವ ಯಾವುದೇ ಪ್ರಯತ್ನವನ್ನು ಬಿಡಲಿಲ್ಲ. ನಾನು ಪ್ರಾಮಾಣಿಕ ಎಂದು ನೀವು ಭಾವಿಸಿದರೆ ಮಾತ್ರ ನನಗೆ ಮತ ನೀಡಿ. ನಾನು ನಿಮ್ಮಿಂದ ಆಯ್ಕೆಯಾದ ನಂತರವೇ ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತೇನೆʼʼ ಎಂದು ಅವರು ಹೇಳಿದ್ದಾರೆ.

ʼʼ2 ದಿನಗಳಲ್ಲಿ ನಾನು ಸಿಎಂ ಹುದೆಗೆ ರಾಜೀನಾಮೆ ನೀಡುತ್ತೇನೆ. ಪಕ್ಷ ಶೀಘ್ರದಲ್ಲಿಯೇ ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿದೆ. ಶಾಸಕರ ಸಭೆಯಲ್ಲಿ ಮುಂದಿನ ಸಿಎಂ ಯಾರಾಗಲಿದ್ದಾರೆ ಎನ್ನುವುದನ್ನು ತೀರ್ಮಾನಿಸಲಾಗುವುದುʼʼ ಎಂದು ಕೇಜ್ರಿವಾಲ್‌ ವಿವರಿಸಿದ್ದಾರೆ. ʼʼನವೆಂಬರ್‌ನಲ್ಲಿ ನಡೆಯಲಿರುವ ಮಹಾರಾಷ್ಟ್ರ ಚುನಾವಣೆಯೊಂದಿಗೆ ದಿಲ್ಲಿ ಚುನಾವಣೆಯನ್ನೂ ನಡೆಸಬೇಕು. ಚುನಾವಣೆ ನಡೆಯುವವರೆಗೂ ಪಕ್ಷದ ಮುಖಂಡರೊಬ್ಬರು ಮುಖ್ಯಮಂತ್ರಿಯಾಗಲಿದ್ದಾರೆʼʼ ಎಂದು ತಿಳಿಸಿದ್ದಾರೆ.

ಬಿಜೆಪಿ ವಿರುದ್ದ ವಾಗ್ದಾಳಿ

ಇದೇ ವೇಳೆ ದಿಲ್ಲಿ ಮುಖ್ಯಮಂತ್ರಿ ಬಿಜೆಪಿ ವಿರುದ್ದ ವಾಗ್ದಾಳಿ ಮುಂದುವರಿಸಿದರು. ಆಪ್‌ ಅನ್ನು ಒಡೆದು ಬಿಜೆಪಿ ಸರ್ಕಾರ ರಚಿಸಲು ಬಯಸಿದೆ ಎಂದು ಅವರು ದೂರಿದ್ದಾರೆ. ಬಿಜೆಪಿಯವರು ನಮ್ಮ ನೈತಿಕ ಸ್ಥೈರ್ಯವನ್ನು ಕುಗ್ಗಿಸಲು ಯತ್ನಸಿ ವಿಫಲರಾಗಿದ್ದಾರೆ ಎಂದೂ ಅವರು ಹೇಳಿದ್ದಾರೆ. “ಬಿಜೆಪಿಯವರು ನಮ್ಮ ಪಕ್ಷವನ್ನು ಒಡೆಯಲು, ನನ್ನ ಧೈರ್ಯ ಮತ್ತು ಸ್ಥೈರ್ಯವನ್ನು ಕುಗ್ಗಿಸಲು ಬಯಸಿದ್ದರು. ಇದಕ್ಕಾಗಿ ಶಾಸಕರನ್ನು, ನಾಯಕರನ್ನು ಜೈಲಿಗೆ ಕಳುಹಿಸುವ ಸೂತ್ರವನ್ನು ಕೈಗೊಂಡಿದ್ದಾರೆ. ನನ್ನನ್ನು ಜೈಲಿಗೆ ಕಳುಹಿಸುವ ಮೂಲಕ ದಿಲ್ಲಿಯಲ್ಲಿ ಸರ್ಕಾರ ರಚಿಸಬಹುದು ಎಂದು ಅವರು ಭಾವಿಸಿದ್ದರು. ಆದರೆ ಅವರಿಗೆ ನಮ್ಮ ಪಕ್ಷವನ್ನು ಮುರಿಯಲು ಸಾಧ್ಯವಾಗಲಿಲ್ಲʼʼ ಎಂದು ಹೇಳಿದ್ದಾರೆ.

ಜೈಲಲ್ಲಿ ಇರುವಾಗ ಮುಖ್ಯಮಂತ್ರಿ ಸ್ಥಾನಕ್ಕೆ ಏಕೆ ರಾಜೀನಾಮೆ ನೀಡಲಿಲ್ಲ ಎಂಬುದರ ಬಗ್ಗೆಯೂ ಮಾತನಾಡಿದ್ದಾರೆ. “ನಾನು ದೇಶದ ಪ್ರಜಾಪ್ರಭುತ್ವವನ್ನು ರಕ್ಷಿಸಲು ಬಯಸಿದ್ದರಿಂದ ಆಗ ರಾಜೀನಾಮೆ ನೀಡಿರಲಿಲ್ಲ. ಆ ಮೂಲಕ ಅವರ ಸೂತ್ರವನ್ನು ಒಡೆದಿದ್ದೇನೆ. ಸರ್ಕಾರವನ್ನು ಜೈಲಿನಿಂದ ನಡೆಸಲು ಯಾಕೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಕೂಡ ಕೇಂದ್ರಕ್ಕೆ ಚಾಟಿ ಬೀಸಿದೆʼʼ ಎಂದು ಕೇಜ್ರಿವಾಲ್‌ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Arvind Kejriwal : ಕೇಜ್ರಿವಾಲ್ ಜೈಲಿಂದ ಬಿಡುಗಡೆಗೊಂಡಾಗ ಪಟಾಕಿ ಸಿಡಿಸಿದವರ ಮೇಲೆ ಬಿತ್ತು ಕೇಸ್‌