Friday, 22nd November 2024

Arvind Kejriwal: ಕೇಜ್ರಿವಾಲ್‌ ನ್ಯಾಯಾಂಗ ಬಂಧನ ಸೆ.25ರವರೆಗೆ ವಿಸ್ತರಣೆ

Arvind Kejriwal

ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ (Delhi Excise Policy Case) ತಿಹಾರ್ ಜೈಲು ಪಾಲಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal)‌ ಅವರ ‌ನ್ಯಾಯಾಂಗ ಬಂಧನವನ್ನು ವಿಸ್ತರಿಸಲಾಗಿದೆ. ಸೆ.25ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ದೆಹಲಿಯ ಕೋರ್ಟ್‌ ಆದೇಶ ಹೊರ ಹಾಕಿದೆ.

ಇಂದು ಅರವಿಂದ ಕೇಜ್ರಿವಾಲ್‌ ಅವರನ್ನು ರೋಸ್‌ ಅವೆನ್ಯೂ ಕೋರ್ಟ್‌ ಎದುರು ತಿಹಾರ್‌ ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರುಪಡಿಸಲಾಗಿತ್ತು. ಇಂದಿಗೆ ಅವರ ನ್ಯಾಯಾಂಗ ಬಂಧನ ಮುಕ್ತಾಯವಾಗುತ್ತಿರುವ ಹಿನ್ನೆಲೆ ಇಂದು ಕೋರ್ಟ್‌ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾ ಇದ್ದ ಪೀಠ, ಅವರ ನ್ಯಾಯಾಂಗ ಬಂಧನವನನು ವಿಸ್ತರಿಸಿದೆ. ಇನ್ನು 3-4ದಿನಗಳಲ್ಲಿ ಆರೋಪಿಗೆ ಚಾರ್ಜ್‌ಶೀಟ್‌ನ ಸಾಫ್ಟ್‌ ಕಾಪಿಯನ್ನು ನೀಡುವುದಾಗಿ ಸಿಬಿಐ ಕೋರ್ಟ್‌ಗೆ ತಿಳಿಸಿದೆ.

ಮತ್ತೊಂದೆಡೆ ಕೇಜ್ರಿವಾಲ್‌ ಅವರ ಜಾಮೀನು ಅರ್ಜಿ ಆದೇಶವನ್ನು ಸುಪ್ರೀಂ ಕೋರ್ಟ್‌ ಕಾಯ್ದಿರಿಸಿದೆ. ಕೇಜ್ರಿವಾಲ್‌ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸೂರ್ಯಕಾಂತ್‌ ಮತ್ತು ಉಜ್ಜಲ್‌ ಭುವನ್‌ ಇದ್ದ ನ್ಯಾಯಪೀಠ, ವಾದ ಪ್ರತಿವಾದಗಳನ್ನು ಅಲಿಸಿದ ಬಳಿಕ ಆದೇಶವನ್ನು ಕಾಯ್ದಿರಿಸಿದೆ.

ಕೇಜ್ರಿವಾಲ್‌ ವಿರುದ್ಧ ಪ್ರಕರಣ ಏನು?

ದೆಹಲಿ ಸರ್ಕಾರವು 2021ರ ನವೆಂಬರ್ 17ರಂದು ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪದ ನಡುವೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ತನಿಖಾ ಸಂಸ್ಥೆಗಳ ಪ್ರಕಾರ ಹೊಸ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭಾಂಶವನ್ನು ಶೇ. 5ರಿಂದ 12ಕ್ಕೆ ಹೆಚ್ಚಿಸಲಾಗಿತ್ತು. ಅಬಕಾರಿ ನೀತಿ ಜಾರಿ ವೇಳೆ ನೂರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದೆ

ಅಬಕಾರಿ ನೀತಿ ಹಗರಣದ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯದ ತಂಡವು ಮಾರ್ಚ್ 21ರ ರಾತ್ರಿ 9 ಗಂಟೆ ವೇಳೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿತ್ತು. ಸಿಬಿಐ ಮತ್ತು ಇಡಿ ಪ್ರಕಾರ, ಅಬಕಾರಿ ನೀತಿಯನ್ನು ಬದಲಾಯಿಸಿದಾಗ ಅಕ್ರಮಗಳು ನಡೆದಿವೆ ಮತ್ತು ಪರವಾನಗಿ ಹೊಂದಿರುವವರಿಗೆ ಅನಗತ್ಯ ಅನುಕೂಲಗಳನ್ನು ವಿಸ್ತರಿಸಲಾಗಿದೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ.

ಕೇಜ್ರಿವಾಲ್ ಅವರಿಗೆ ಜೈಲಿನಲ್ಲಿ ಜೀವ ಬೆದರಿಕೆ ಇದೆ ಎಂದು ಆಪ್‌ ಆತಂಕ ವ್ಯಕ್ತಪಡಿಸಿದೆ. ತಿಹಾರ್‌ನಲ್ಲಿ ಕೇಜ್ರಿವಾಲ್‌ಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡದೇ ಅವರ ಹತ್ಯೆಗೆ ಬಿಜೆಪಿ ಸಂಚು ರೂಪಿಸಿದೆ ಎಂದೂ ಪಕ್ಷ ಗಂಭೀರ ಆರೋಪ ಮಾಡುತ್ತಲೇ ಇದೆ. ಕೆಲವು ದಿನಗಳ ಹಿಂದೆ ಮಾಧ್ಯಮಗೋಷ್ಠಿ ನಡೆಸಿದ ದಿಲ್ಲಿ ಸಚಿವೆ ಆತಿಷಿ, ʼʼಕೇಜ್ರಿವಾಲ್‌ ಅವರನ್ನು ಜೈಲಿಗೆ ತಳ್ಳುವುದು ಮಾತ್ರವಲ್ಲ, ಅವರನ್ನು ಅನಾರೋಗ್ಯಕ್ಕೀಡು ಮಾಡಿ ಕೊಲೆಗೈಯುವ ಸಂಚು ಬಿಜೆಪಿಗಿದೆ. ಸರ್ವಾಧಿಕಾರಿ ತಮ್ಮ ವಿರೋಧಿಗಳನ್ನು ಜೈಲಿಗೆ ತಳ್ಳಿ ಅವರ ಆರೋಗ್ಯ ಹದಗೆಡುವಂತೆ ಮಾಡುತ್ತಿದ್ದಾರೆ. ಕೇಜ್ರಿವಾಲ್‌ಗೆ ಏನಾದರೂ ಹೆಚ್ಚು ಕಡಿಮೆ ಆದರೆ ಅದಕ್ಕೆ ಬಿಜೆಪಿಯೇ ನೇರ ಜವಾಬ್ದಾರಿʼʼ ಎಂದು ಹೇಳಿದ್ದರು.

ಈ ಸುದ್ದಿಯನ್ನೂ ಓದಿ: Arvind Kejriwal: ಇಂದೂ ಇಲ್ಲ ಕೇಜ್ರಿವಾಲ್‌ಗೆ ಜಾಮೀನು ಭಾಗ್ಯ; ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌