Sunday, 24th November 2024

Arvind Kejriwal : ಜಾರ್ಖಂಡ್‌ನಲ್ಲಿ ಜೆಎಂಎಂ ಗೆಲವು; ಟ್ವೀಟ್‌ ಮೂಲಕ ಅಭಿನಂದನೆ ತಿಳಿಸಿದ ಕೇಜ್ರಿವಾಲ್‌

Arvind Kejriwal

ನವದೆಹಲಿ: ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ (Jharkhand assembly election) ಜೆಎಂಎಂ (JMM) ಹಾಗೂ ಇಂಡಿಯಾ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಹಾಗೂ ದಿಲ್ಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal ) ಅವರು ಶನಿವಾರ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ (Hemant Soren) ಅವರನ್ನು ಅಭಿನಂದಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿದ ಅವರು ಜಾರ್ಖಂಡ್‌ ಜನರು ಸೊರೆನ್‌ ಮೇಲೆ ನಂಬಿಕೆ ಇಟ್ಟು ಮತ ಹಾಕಿ ಗೆಲ್ಲಿಸಿದ್ದಾರೆ. ಅವರ ಈ ಅದ್ಭುತ ಗೆಲುವಿಗೆ ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ. ಜಾರ್ಖಂಡ್‌ ಜನರು ಬಿಜೆಪಿಯ ಮೋಸವನ್ನು ತಿರಸ್ಕರಿಸಿದ್ದಾರೆ. ರಾಜ್ಯದಲ್ಲಿ ಮತ್ತೊಮ್ಮೆ ಸಂವಿಧಾನ, ಬುಡಕಟ್ಟು ಗೌರವ ಉಳಿದಿದೆ ಎಂದು ಬರೆದಿದ್ದಾರೆ.

ಜಾರ್ಖಂಡ್‌ನಲ್ಲಿ ಜೆಎಂಎಂ ಹಾಗೂ ಇಂಡಿಯಾ ಮೈತ್ರಿಕೂಟದ ಸಮ್ಮಿಶ್ರ ಸರ್ಕಾರ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ದೆಹಲಿ ಮುಖ್ಯಮಂತ್ರಿ  ಅತಿಶಿ ಕೂಡ ಹೇಮಂತ್ ಸೊರೆನ್ ಅವರಿಗೆ ಶುಭಾಶಯಗಳನ್ನು ಸಲ್ಲಿಸಿದ್ದಾರೆ. ಟ್ವೀಟ್‌ ಮೂಲಕ ಅಭಿನಂದನೆ ತಿಳಿಸಿದ ಅವರು, “ಈ ಗೆಲುವು ಬುಡಕಟ್ಟು ಜನಾಂಗದ ಅಸ್ಮಿತೆಯ ವಿಜಯವಾಗಿದೆ. ಬಿಜೆಪಿ ಅಧಿಕಾರ ಹಿಡಿಯಲು ಎಷ್ಟೇ ಷಡ್ಯಂತ್ರಗಳನ್ನು ಮಾಡಿದರೂ ಪ್ರಜಾಪ್ರಭುತ್ವವು ಯಾವಾಗಲೂ ಗೆಲ್ಲುತ್ತದೆ ಎಂಬ ಸಂದೇಶವನ್ನು ಜಾರ್ಖಂಡ್‌ನ ಜನರು ನೀಡಿದ್ದಾರೆ” ಎಂದು ಹೇಳಿದ್ದಾರೆ.

ಜಾರ್ಖಂಡ್‌ನಲ್ಲಿ ಒಟ್ಟು 50 ಸೀಟ್‌ ಗೆದ್ದಿರುವ ಜೆಎಂಎಂ ಹಾಗೂ ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟ ಮತ್ತೊಮ್ಮೆ ಹೇಮಂತ್‌ ಸೂರೇನ್‌ರನ್ನು ಮುಖ್ಯಮಂತ್ರಿ ಮಾಡಲು ಸಜ್ಜಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಈ ವರ್ಷದ ಆರಂಭದಲ್ಲಿ ಸೂರೇನ್‌ ಬಂಧನಕ್ಕೆ ಒಳಗಾಗಿದ್ದರು. ಅದಾದ ಬಳಿಕ ಬಿಜೆಪಿ ನಿರಂತರವಾಗಿ ಭ್ರಷ್ಟಾಚಾರದ ಆರೋಪವನ್ನು ಮಾಡುತ್ತಾ ಬಂದಿತ್ತು. ಆದರೂ ಮತದಾರ ಜೆಎಂಎಂ ಕೈ ಬಿಡಲಿಲ್ಲ.

ಇದನ್ನೂ ಓದಿ : Election Results 2024: ಎಲ್ಲಾ ರಾಜ್ಯಗಳಲ್ಲಿ ಆಡಳಿತಪರ ಅಲೆ; ಮಹಾರಾಷ್ಟ್ರ ಮಹಾಯುತಿಗೆ, ಜಾರ್ಖಂಡ್‌ಗೆ ಸೊರೇನ್‌, ಕರ್ನಾಟಕದಲ್ಲಿ ಕೈಗೆ ಜೈ