Friday, 22nd November 2024

Arvind Kejriwal : ಅರವಿಂದ್ ಕೇಜ್ರಿವಾಲ್ ಪತ್ನಿ ಸುನಿತಾ ಡೆಲ್ಲಿಯ ಮುಂದಿನ ಮುಖ್ಯಮಂತ್ರಿ?

ಬೆಂಗಳೂರು: ಮುಂದಿನ ಚುನಾವಣೆವರೆಗೆ ಸುನೀತಾ ಕೇಜ್ರಿವಾಲ್ ದೆಹಲಿಯ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ ಎಂಬುದಾಗಿ ವರದಿಯಾಗಿದೆ. ಭಾನುವಾರ ಅರವಿಂದ್ ಕೇಜ್ರಿವಾಲ್ (Arvind Kejriwal) ತಾವು ಸಿಎಂ ಹುದ್ದೆಯನ್ನು ತೊರೆಯುವುದಾಗಿ ಹೇಳಿಕೊಂಡ ಬಳಿಕ ಇಂಥದ್ದೊಂದು ಬೆಳವಣಿಗೆ ಸಂಭವಿಸಿದೆ. ಇಂಥದ್ದೊಂದು ಸಾಧ್ಯತೆಗಳನ್ನು ಬಿಜೆಪಿ ಮೊದಲು ಗ್ರಹಿಸಿದ್ದು ಆ ಬಗ್ಗೆ ಟ್ವೀಟ್ ಮಾಡಿದೆ. ಅಲ್ಲದೆ ಇದೊಂದು ಅನುಕಂಪ ಗಳಿಸುವ ಕ್ರಮ ಎಂಬುದಾಗಿಯೂ ಹೇಳಿಕೊಂಡಿದೆ.

“ಕೇಜ್ರಿವಾಲ್ ಅವರು ಬದಲಿಯನ್ನು ಹುಡುಕಲು 48 ಗಂಟೆಗಳ ಸಮಯವನ್ನು ಕೋರಿದ್ದಾರೆ. ಈ ರೀತಿಯಾಗಿ ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಮಾಡಲು ಯತ್ನಿಸುತ್ತಾರೆ ಎಂದು ಬಿಜೆಪಿಯ ಸುಧಾಂಶು ತ್ರಿವೇದಿ ಹೇಳಿದ್ದಾರೆ.

ಬಿಜೆಪಿಯ ಶೆಹಜಾದ್ ಪೂನಾವಾಲಾ , ಅರವಿಂದ್‌ ಕೇಜ್ರಿವಾಲ್ ಅವರು ತಮ್ಮ ಪತ್ನಿಯನ್ನು ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುತ್ತಾರೆಯೇ ಎಂಬುದಾಗಿ ಪ್ರಶ್ನಿಸಿದ್ದಾರೆ. ಎಲ್ಲಾ ಅಧಿಕಾರ ಮತ್ತು ಯಾವುದೇ ಜವಾಬ್ದಾರಿಯಿಲ್ಲ ಎಂಬ ಪರಿಕಲ್ಪನೆಯ ಮೇಲೆ ಕೇಜ್ರಿವಾಲ್ ತಮ್ಮ ಪತ್ನಿಯನ್ನು ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುತ್ತಾರೆಯೇ? ಆ ಮೂಲಕ ಅವರು ಹೊಸ ನಾಟಕ ಮಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಡೆಲ್ಲಿ ಆಡಳಿತದಲ್ಲಿ ಸುನೀತಾ ಕೇಜ್ರಿವಾಲ್ ಅವರ ಪಾತ್ರದ ಬಗ್ಗೆ ಊಹಾಪೋಹಗಳಿವೆ. ಕೇಜ್ರಿವಾಲ್ ಅವರನ್ನು ಜೈಲಿಗೆ ಹೋದ ಬಳಿಕದಿಂದ ಹರಿಯಾಣ ಚುನಾವಣೆ ತನಕ ಅವರ ಪತ್ನಿ ಸುನಿತಾ ಸಾರ್ವಜನಿಕ ರ್ಯಾಲಿಗಳನ್ನು ನಡೆಸುತ್ತಿದ್ದರು. ಪಕ್ಷದ ಪ್ರಚಾರವನ್ನು ಮುನ್ನಡೆಸುತ್ತಿದ್ದಾರೆ. ಕೇಜ್ರಿವಾಲ್ ಅವರು ಜೈಲಿನಲ್ಲಿದ್ದಾಗ ಸಿಎಂ ಆಗಿ ಮುಂದುವರಿಯಲು ನಿರ್ಧರಿಸಿದ್ದರು. ಅದನ್ನೂ ಈಗ ಜಾರಿಗೆ ತರುತ್ತಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Arvind Kejriwal: ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಘೋಷಿಸಿದ ಅರವಿಂದ್‌ ಕೇಜ್ರಿವಾಲ್‌

ಜನರು ಮತ್ತೆ ಆಯ್ಕೆ ಮಾಡುವವರೆಗೂ ಮನೀಶ್ ಸಿಸೋಡಿಯಾ ಮತ್ತು ಅವರು ಕ್ರಮವಾಗಿ ತಮ್ಮ ಕುರ್ಚಿಗಳಲ್ಲಿ (ಸಿಎಂ ಮತ್ತು ಉಪಮುಖ್ಯಮಂತ್ರಿ) ಕುಳಿತುಕೊಳ್ಳುವುದಿಲ್ಲ ಎಂದು ಕೇಜ್ರಿವಾಲ್ ಹೇಳಿಕೆ ನೀಡಿದ್ದರು.

ದೆಹಲಿ ಕ್ಯಾಬಿನೆಟ್‌ನಲ್ಲಿ ಕೇವಲ ಐದು ಸಚಿವರಿದ್ದಾರೆ, ಗೋಪಾಲ್ ರಾಯ್ ಹಿರಿಯರು, ನಂತರ ಇಮ್ರಾನ್ ಹುಸೇನ್, ಕೈಲಾಶ್ ಗೆಹ್ಲೋಟ್, ಸೌರಭ್ ಭಾರದ್ವಾಜ್ ಮತ್ತು ಅತಿಶಿ. ಗೃಹ, ಕಾನೂನು, ಹಣಕಾಸು ಮತ್ತು ಯೋಜನೆ ಸೇರಿದಂತೆ ಪ್ರಮುಖ ಖಾತೆಗಳು ಕೈಲಾಶ್ ಗೆಹ್ಲೋಟ್ ಅವರ ಬಳಿ ಇವೆ.

ಅನುಕಂಪದ ನಾಟಕ ಎಂದ ಬಿಜೆಪಿ

ಕೇಜ್ರಿವಾಲ್ ಅವರ ರಾಜೀನಾಮೆಯು ಸಾರ್ವಜನಿಕ ಸಹಾನುಭೂತಿ ಪಡೆಯುವ ನಾಟಕ ಎಂದು ಬಿಜೆಪಿ ಆರೋಪಿಸಿದೆ. ದೊಡ್ಡ ಭ್ರಷ್ಟಾಚಾರ ಹಗರಣಗಳಲ್ಲಿ ಸಿಲುಕಿದ ನಂತರ ಮತದಾರರನ್ನು ಎದುರಿಸಲು ಅವರಿಗೆ ಧೈರ್ಯವಿಲ್ಲ. ನೈತಿಕ ಆಧಾರದ ಮೇಲೆ ಕೇಜ್ರಿವಾಲ್ ಬಹಳ ಮೊದಲೇ ರಾಜೀನಾಮೆ ನೀಡಬೇಕಿತ್ತು. ಅವರು ಜೈಲಿನಲ್ಲಿದ್ದಾಗ ಸ್ವಲ್ಪ ಆತ್ಮಾವಲೋಕನ ಮಾಡಿಕೊಂಡಂತೆ ತೋರುತ್ತದೆ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ.