Friday, 22nd November 2024

Arvind Kejriwal : ಮಂಗಳವಾರ ಲೆಫ್ಟಿನೆಂಟ್‌ ಗವರ್ನರ್‌ ಭೇಟಿ ಮಾಡಲಿರುವ ಕೇಜ್ರಿವಾಲ್‌; ರಾಜೀನಾಮೆ ಸಾಧ್ಯತೆ

Arvind Kejriwal

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಸಂಜೆ 4: 30 ಕ್ಕೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರನ್ನು ಭೇಟಿಯಾಗುವುದಕ್ಕೆ ಸಮಯ ನಿಗದಿ ಮಾಡಿದ್ದಾರೆ. ಹೀಗಾಗಿ ಅವರು ಅಂದು ರಾಜೀನಾಮೆ ಸಲ್ಲಿಸುವ ಸಾಧ್ಯತೆಯಿದೆ. “ಮುಖ್ಯಮಂತ್ರಿ ಮಂಗಳವಾರ ಸಭೆ ನಡೆಸಲು ಸಕ್ಸೇನಾ ಅವರಿಂದ ಸಮಯ ಕೋರಿದ್ದಾರೆ. ಅವರು ರಾಜೀನಾಮೆ ನೀಡುವ ಸಾಧ್ಯತೆಯಿದೆ” ಎಂದು ಆಮ್ ಆದ್ಮಿ ಪಕ್ಷ ಏಜೆನ್ಸಿಗೆ ತಿಳಿಸಿದೆ.

ವರದಿಯ ಪ್ರಕಾರ, ಲೆಫ್ಟಿನೆಂಟ್ ಗವರ್ನರ್ ಮಂಗಳವಾರ ಸಂಜೆ 4: 30 ಕ್ಕೆ ಸಭೆ ನಡೆಸಲು ದೆಹಲಿ ಸಿಎಂ ಕೇಜ್ರಿವಾಲ್ ಅವರಿಗೆ ಸಮಯ ನೀಡಿದ್ದಾರೆ. ಭಾನುವಾರ, ಕೇಜ್ರಿವಾಲ್ ತಮ್ಮ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುವಾಗ ರಾಜೀನಾಮೆ ನೀಡುವ ನಿರ್ಧಾರ ಘೋಷಿಸಿದ್ದರು. “ನಾನು 2 ದಿನಗಳ ನಂತರ ರಾಜೀನಾಮೆ ನೀಡಲಿದ್ದೇನೆ. ನಾನು ಪ್ರಾಮಾಣಿಕನೇ ಎಂದು ಜನರನ್ನು ಕೇಳಿ. ಅವರು ಪ್ರತಿಕ್ರಿಯಿಸುವವರೆಗೂ ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ. ಜನರು ನನಗೆ ಪ್ರಾಮಾಣಿಕತೆಯ ಪ್ರಮಾಣಪತ್ರವನ್ನು ನೀಡಿದ ನಂತರವೇ ನಾನು ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತೇನೆ. ಜೈಲಿನಿಂದ ಹೊರಬಂದ ನಂತರ ‘ಅಗ್ನಿಪರೀಕ್ಷೆ’ಗೆ ಒಳಪಡಲು ಬಯಸುತ್ತೇನೆ” ಎಂದು 54 ವರ್ಷದ ನಾಯಕ ಹೇಳಿದ್ದಾರೆ.

ಇದನ್ನೂ ಓದಿ : PM Modi Birthday: 800 ಕೆಜಿ ಧಾನ್ಯದಲ್ಲಿ ಅರಳಿದ ಮೋದಿ ಚಿತ್ರ; 13 ವರ್ಷದ ಬಾಲಕಿ ಸಾಧನೆಗೆ ವಿಶ್ವ ದಾಖಲೆ ಗರಿ

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ಸಲ್ಲಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ಪಡೆದ ನಂತರ ದೆಹಲಿಯ ತಿಹಾರ್ ಜೈಲಿನಿಂದ ಹೊರಬಂದ ಎರಡು ದಿನಗಳ ನಂತರ ಕೇಜ್ರಿವಾಲ್ ಈ ಘೋಷಣೆ ಮಾಡಿದ್ದಾರೆ.

ಕೇಜ್ರಿವಾಲ್ ಅವರಿಗೆ ಜನರ ಮೇಲೆ ನಂಬಿಕೆ ಇದೆ

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ನಾಯಕನನ್ನು ಆಯ್ಕೆ ಮಾಡಲು ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ ಎಂದು ದೆಹಲಿ ಸಚಿವ ಸೌರಭ್ ಭಾರದ್ವಾಜ್ ಹೇಳಿದ್ದಾರೆ.”ಕಳೆದ ಎರಡು ವರ್ಷಗಳಲ್ಲಿ ಬಿಜೆಪಿ ಏನೆಲ್ಲ ಮಾಡಿದರೂ ಮುಖ್ಯಮಂತ್ರಿಗೆ ಇನ್ನೂ ಜನರ ಮೇಲೆ ನಂಬಿಕೆ ಇದೆ. ದೆಹಲಿಯ ಜನರು ಚುನಾವಣೆಗಳು ನಡೆಯಲು ಉತ್ಸುಕರಾಗಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಬಹುದು” ಎಂದು ಎಎಪಿ ನಾಯಕ ಹೇಳಿದ್ದಾರೆ.