ಲಖನೌ/ನವದೆಹಲಿ: ಅ.3ರಂದು 8 ಮಂದಿಯ ಸಾವಿಗೆ ಕಾರಣವಾದ ಹಿಂಸಾಚಾರ ಕುರಿತು ಕೇಂದ್ರ ಸಚಿವ ಅಜಯ್ ಮಿಶ್ರಾರ ಪುತ್ರ ಆಶಿಷ್ ಮಿಶ್ರಾರನ್ನು ಸತತ 8 ಗಂಟೆಗಳ ಕಾಲ ತನಿಖೆ ನಡೆಸಿದ ಬಳಿಕ ಬಂಧಿಸ ಲಾಗಿದೆ.
ಉತ್ತರಪ್ರದೇಶದ ಲಖೀಂಪುರ ಖೇರಿಯಲ್ಲಿ ರೈತರ ಮೇಲೆ ಕಾರು ಹತ್ತಿಸಿದ ಆರೋಪ ಹೊತ್ತಿರುವ ಆಶಿಷ್ ಮಿಶ್ರಾ ಕೊನೆಗೂ ಶನಿವಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ದೆದುರು ಹಾಜರಾದರು. ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರಕಾರದ ತನಿಖೆ ಕುರಿತು ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಸಮನ್ಸ್ ಜಾರಿ ಮಾಡಿದ್ದರೂ ಮಿಶ್ರಾ ಅವರು ಶುಕ್ರವಾರ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ 2ನೇ ಸಮನ್ಸ್ ಜಾರಿ ಮಾಡಲಾಗಿತ್ತು. ಅದರಂತೆ ಶನಿವಾರ ಬೆಳಗ್ಗೆ 11 ಗಂಟೆಗೆ ಬಿಗಿ ಪೊಲೀಸ್ ಬಂದೋಬಸ್ತ್ನೊಂದಿಗೆ ಮಿಶ್ರಾ ತನಿಖಾ ತಂಡದೆದುದು ಹಾಜರಾದರು.
ಇದೇ ವೇಳೆ, ರೈತರ ಹತ್ಯೆಯು ವ್ಯವಸ್ಥಿತ ಸಂಚು ಎಂದು ಆರೋಪಿಸಿರುವ ರೈತ ಸಂಘಟನೆಗಳು, ಕೇಂದ್ರ ಸಚಿವ ಅಜಯ್ ಮಿಶ್ರಾ ಹಾಗೂ ಪುತ್ರ ಆಶಿಷ್ ಮಿಶ್ರಾರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿವೆ. ಈ ನಡುವೆ, ಲಖೀಂಪುರ ಘಟನೆ ಖಂಡಿಸಿ ಅ.11ರಂದು ನಡೆಯುವ ಮಹಾ ರಾಷ್ಟ್ರ ಬಂದ್‌ಗೆ ನಮ್ಮ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಹೇಳಿದ್ದಾರೆ. ಕೇಂದ್ರ ಸರಕಾರದ ರೈತ ವಿರೋಧಿ ನೀತಿಗಳನ್ನು ಒಕ್ಕೊರಲಿ ನಿಂದ ಖಂಡಿಸಿ, ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದೂ ಅವರು ಹೇಳಿದ್ದಾರೆ.