ಲಖನೌ: ಲಖೀಂಪುರ್ ಖೇರಿ ಹಿಂಸಾಚಾರದ ಪ್ರಮುಖ ಆರೋಪಿ, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು ಷರತ್ತಿನೊಂದಿಗೆ ಮೂರು ದಿನಗಳ ಪೊಲೀಸ್ ರಿಮಾಂಡ್ ಗೆ ಕಳುಹಿಸಲಾಗಿದೆ.
ಶನಿವಾರ ತಡರಾತ್ರಿ ಆಶಿಶ್ ಮಿಶ್ರಾ ಅವರನ್ನು ಬಂಧಿಸಿದ ನಂತರ ಸ್ಥಳೀಯ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಇಂದು ಆಶಿಶ್ ಪೋಲಿಸ್ ಕಸ್ಟಡಿಗಾಗಿ ರಿಮಾಂಡ್ ಅರ್ಜಿಯ ವಿಚಾರಣೆ ನಡೆಯಿತು.
ಲಖೀಂಪುರ್ ಖೇರ್ ಹಿಂಸಾಚಾರ ಸಂಬಂಧಿಸಿದಂತೆ ಶನಿವಾರ ಸುಮಾರು 12 ಗಂಟೆಗಳ ಕಾಲ ಆಶಿಶ್ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಲಖೀಂಪುರ್ ಖೇರಿಯ ಅಪರಾಧ ವಿಭಾಗದ ಕಚೇರಿಯಲ್ಲಿ ವೈದ್ಯಕೀಯ ತಂಡ ಆಶಿಶ್ ಮಿಶ್ರಾ ಅವರನ್ನು ಪರೀಕ್ಷಿಸಿದ ನಂತರ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಆತನನ್ನು ಕಸ್ಟಡಿಗೆ ನೀಡಿದೆ ಎಂದು ಪ್ರಾಸಿಕ್ಯೂಷನ್ ವಕೀಲ ಯಾದವ್ ತಿಳಿಸಿದ್ದಾರೆ.
ಎಸ್ ಐಟಿ ವಿಚಾರಣೆ ನಡೆಸುವಾಗಲೆಲ್ಲ ಆಶಿಶ್ ಮಿಶ್ರಾ ವೈದ್ಯಕೀಯ ತಪಾಸಣೆ ನಡೆಸಬೇಕು, ವಿಚಾರಣೆ ವೇಳೆಯಲ್ಲಿ ಪೊಲೀಸರು ಕಿರುಕುಳ ನೀಡಬಾರದು, ವಿಚಾರಣೆ ವೇಳೆಯಲ್ಲಿ ವಿಚಾರಣೆಯ ಸಮಯದಲ್ಲಿ ದೂರದಿಂದಲೇ ಆತನನ್ನು ವೀಕ್ಷಿಸಲು ವಕೀಲರಿಗೆ ಅನುಮತಿ ಸೇರಿದಂತೆ ಪೊಲೀಸ್ ರಿಮಾಂಡ್ ಗಾಗಿ ಮೂರು ಷರತ್ತುಗಳನ್ನು ನ್ಯಾಯಾಲಯ ಹಾಕಿದೆ.