ಮುಂಬೈ: ಏಷ್ಯನ್ ಪೇಂಟ್ಸ್ ನಾನ್-ಎಕ್ಸಿಕ್ಯುಟಿವ್ ಡೈರೆಕ್ಟರ್ ಅಶ್ವಿನ್ ದಾಣಿ (79) ಗುರುವಾರ ನಿಧನರಾದರು.
2021ರಲ್ಲಿ ಆಡಳಿತ ಮಂಡಳಿಯ ದೀಪಕ್ ಸತ್ವಾಳ್ಕೇಕರ್ ಅವರನ್ನು ಚೇರ್ಮನ್ ಆಗಿ ನೇಮಕ ಮಾಡಿದ ಬಳಿಕ, ದಾಣಿ ಅವರು ಕಂಪನಿಯ ನಾನ್ ಎಕ್ಸಿಕ್ಯೂಟಿವ್ ಹಾಗೂ ಪ್ರಮೋಟರ್ ಡೈರೆಕ್ಟರ್ ಆಗಿ ಮುಂದುವರಿದಿದ್ದರು. ಭಾರತದಲ್ಲಿ ಪೇಂಟ್ಸ್ ಮಾರು ಕಟ್ಟೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವಲ್ಲಿ ದಾಣಿ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಅಶ್ವಿನ್ ದಾಣಿ ಅವರ ನಿಧನದ ಸುದ್ದಿಯನ್ನು ಷೇರು ಮಾರುಕಟ್ಟೆಗೆ ಮಾಹಿತಿ ನೀಡಿರುವ ಏಷ್ಯನ್ ಕಂಪನಿಯು, ಅನಾರೋಗ್ಯ ದಿಂದ ಬಳಲುತ್ತಿದ್ದ ದಾಣಿ ನಿಧನರಾಗಿದ್ದಾರೆ ಎಂದು ತಿಳಿಸಿದೆ. ಅಶ್ವಿನ್ ಅವರು 1968ರಿಂದಲೂ ಕಂಪನಿಯಲ್ಲಿದ್ದರು. ಕಂಪನಿಯು ತಾಂತ್ರಿಕತೆಯಲ್ಲಿ ನೈಪುಣ್ಯತೆ ಸಾಧಿಸುವುದರ ಹಿಂದಿ ಶಕ್ತಿಯಾಗಿದ್ದರು.
ಕಂಪನಿಯ ಆಡಳಿತ ಮಂಡಳಿಗೆ ಅವರು 1970ರಲ್ಲಿ ಸೇರ್ಪಡೆಯಾಗಿದ್ದರು. 1998ರಿಂದ 2009ರವರೆಗೆ ಅವರ ಕಂಪನಿಯ ವೈಸ್ ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ತಿಳಿಸಿದೆ.
2009ರಿಂದ ಅಶ್ವಿನ್ ದಾಣಿ ಅವರು ಮಂಡಳಿ ಮತ್ತು ಕಂಪನಿಯ ಕಾರ್ಯನಿರ್ವಾಹಕ-ಅಲ್ಲದ ನಿರ್ದೇಶಕ ಮತ್ತು ಉಪಾಧ್ಯಕ್ಷ ರಾಗಿ ಮುಂದುವರಿದ್ದರು. 2018 ರಿಂದ 2021ರ ನಡುವಿನ ಅವಧಿಗೆ ಅವರು ಮಂಡಳಿ ಮತ್ತು ಕಂಪನಿಯ ಅಧ್ಯಕ್ಷ ಸ್ಥಾನವನ್ನು ಹೊಂದಿದ್ದರು.
ಅಶ್ವಿನ್ ದಾಣಿ ಅವರ ನಾಯಕತ್ವದಲ್ಲಿ, ಏಷ್ಯನ್ ಪೇಂಟ್ಸ್ ತನ್ನ ಜಾಗತಿಕ ಕಾರ್ಯಾಚರಣೆಗಳನ್ನು ಗಣನೀಯವಾಗಿ ವಿಸ್ತರಿಸಿತು.
ಅಶ್ವಿನ್ ದಾಣಿ ಅವರ ತಂದೆ ಹಾಗೂ ಇತರ ಮೂವರು 1942ರಲ್ಲಿ ಏಷ್ಯನ್ ಕಂಪನಿ ಸ್ಥಾಪಿಸಿದ್ದರು.