Sunday, 15th December 2024

ಬೆಂಗಾವಲು ಪಡೆಯ ಉಸ್ತುವಾರಿ ಎಎಸ್​ಐ ಆತ್ಮಹತ್ಯೆ

ಹೈದರಾಬಾದ್: ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ತೆಲಂಗಾಣದಲ್ಲಿ ಪೊಲೀಸ್​ ಅಧಿಕಾರಿಯೊಬ್ಬರು ಸಾವಿಗೆ ಶರಣಾಗಿದ್ದಾರೆ.

ಸಚಿವೆ ಸಬಿತಾ ಇಂದ್ರಾರೆಡ್ಡಿ ಅವರ ಪೊಲೀಸ್​ ಬೆಂಗಾವಲು ಪಡೆಯ ಉಸ್ತುವಾರಿಯಾಗಿದ್ದ ಸಹಾಯಕ ಸಬ್​ ಇನ್ಸ್​​ಪೆಕ್ಟರ್​​ (ಎಎಸ್​ಐ) ಮೊಹಮ್ಮದ್​​ ಫಜಲ್​ ಅಲಿ (59) ತಮ್ಮ ಸರ್ವೀಸ್​ ಪಿಸ್ತೂಲ್​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಜಧಾನಿ ಹೈದರಾಬಾದ್​ನ ಅಮೀರ್​ಪೇಟ್​​ ಪ್ರದೇಶದ ಶ್ರೀನಗರ ಕಾಲೋನಿಯ ಹೋಟೆಲೊಂದರ ಸಮೀಪ, ತಮ್ಮ ಮಗಳೆದುರೇ ಫಜಲ್​ ಅಲಿ ಗುಂಡು ಹಾರಿಸಿಕೊಂಡರು ಎಂದು ತಿಳಿದು ಬಂದಿದೆ. ಬೆಳಿಗ್ಗೆ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಮಗಳನ್ನು ಕರೆದುಕೊಂಡು ಬಂದಿದ್ದರು. ಇಲ್ಲಿನ ಮಣಿಕಂಠ ಹೋಟೆಲ್​ ಸಮೀಪ ನಿಂತು ಮಗಳೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ, ಏಕಾಏಕಿ ಸರ್ವೀಸ್ ಪಿಸ್ತೂಲ್​ನಿಂದ ಗುಂಡು ಹಾರಿಸಿಕೊಂಡಿದ್ದಾರೆ. ಈ ವಿಷಯ ತಿಳಿದ ಕೂಡಲೇ ಸ್ಥಳೀಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು.

ಎಎಸ್​ಐ ಮೃತದೇಹವನ್ನು ಉಸ್ಮಾನಿಯ ಆಸ್ಪತ್ರೆಗೆ ರವಾನಿಸಲಾಗಿದೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಘಟನಾ ಸ್ಥಳಕ್ಕೆ ಸಚಿವೆ ಸಬಿತಾ ಇಂದ್ರಾರೆಡ್ಡಿ, ಪಶ್ಚಿಮ ವಿಭಾಗದ ಉಪ ಪೊಲೀಸ್​ ಆಯುಕ್ತ ಜೋಯಲ್​ ಡೇವಿಸ್​ ಹಾಗೂ ಹಿರಿಯ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದೆ. ನವೆಂಬರ್ 30ರಂದು ಮತದಾನ ನಡೆಯಲಿದ್ದು, ಡಿಸೆಂಬರ್​ 3ರಂದು ಫಲಿತಾಂಶ ಪ್ರಕಟವಾಗಿದೆ.