Sunday, 15th December 2024

ಭೀಕರ ರಸ್ತೆ ಅಪಘಾತ: ಏಳು ವಿದ್ಯಾರ್ಥಿಗಳ ಸಾವು

ಗುವಾಹಟಿ: ನಗರದ ಜಲುಕ್ಬರಿ ಪ್ರದೇಶದಲ್ಲಿ ರಸ್ತೆ ಅಪಘಾತ ಸಂಭವಿಸಿದ್ದು, ಅಸ್ಸಾಂ ಎಂಜಿನಿಯರಿಂಗ್ ಕಾಲೇಜಿನ ಏಳು ವಿದ್ಯಾರ್ಥಿಗಳು ಸಾವನ್ನಪ್ಪಿ ದ್ದಾರೆ.

ಘಟನೆಯಲ್ಲಿ 6 ಮಂದಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದು ಗುವಾಹಟಿ ಜಂಟಿ ಪೊಲೀಸ್ ಕಮಿಷನರ್ ತುಬೆ ಪ್ರತೀಕ್ ವಿಜಯ್ ಕುಮಾರ್ ತಿಳಿಸಿದರು.

ತೃತೀಯ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮುಂಜಾನೆ ವಾಹನ ದಲ್ಲಿ ತಮ್ಮ ಕಾಲೇಜಿನಿಂದ ಹೊರಟಿದ್ದರು. ರಸ್ತೆ ಮಧ್ಯೆ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ವಾಹನ ಡಿವೈಡರ್ ದಾಟಿ ಎದುರಿನ ಲೇನ್‌ನಲ್ಲಿ ಸಾಗುತ್ತಿದ್ದಂತೆ ಗೂಡ್ಸ್ ಕ್ಯಾರಿಯರ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಏಳು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟರು. ಮೂವರನ್ನು ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಜಿಎಂಸಿಎಚ್) ದಾಖಲಿಸಲಾಗಿದೆ.

ಗೂಡ್ಸ್ ಕ್ಯಾರಿಯರ್ ವಾಹನದಲ್ಲಿದ್ದ ಚಾಲಕ ಸೇರಿದಂತೆ ಮೂವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದರು. ಮೃತ ವಿದ್ಯಾರ್ಥಿಗಳೆಲ್ಲರು ಅಸ್ಸಾಂ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಎಂದು ಪೊಲೀಸರು ಖಚಿತಪಡಿಸಿದ್ದಾರೆ.