ಡಿಸ್ಪುರ: ಅರ್ಚಕರು, ಸಂತರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಅಸ್ಸಾಂ ಕಾಂಗ್ರೆಸ್ ಶಾಸಕ ಅಫ್ತಾಬುದ್ದೀನ್ ಮುಲ್ಲಾ ಅವರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ.
“ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಜಾಲೇಶ್ವರ್ ವಿಧಾನಸಭೆ ಕ್ಷೇತ್ರದ ಶಾಸಕ ಅಫ್ತಾಬುದ್ದೀನ್ ಮುಲ್ಲಾರನ್ನು ಬಂಧಿಸಲಾಗಿದೆ” ಎಂದು ಅಸ್ಸಾಂ ಪೊಲೀಸರು ಮಾಹಿತಿ ನೀಡಿದ್ದಾರೆ.
ಅಫ್ತಾಬುದ್ದೀನ್ ಮುಲ್ಲಾ ಅವರು ನವೆಂಬರ್ 4ರಂದು ಗೋವಾಲ್‌ಪರ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಸಾಧುಗಳು, ಸಂತರು ಹಾಗೂ ಅರ್ಚಕರ ವಿರುದ್ಧ ಮಾತನಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಡಿಸ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈಗ ಪೊಲೀಸರು ಅವರನ್ನು ಬಂಧಿಸಿದ್ದಾರೆ.
“ಎಲ್ಲಿಯೇ ಅತ್ಯಾಚಾರ ನಡೆದರೂ, ಆ ಅತ್ಯಾಚಾರವನ್ನು ಸಾಧು, ಅರ್ಚಕರು ಅಥವಾ ನಾಮ್‌ಘೋರಿಯಾಗಳೇ (ವೈಷ್ಣವ ಪ್ರಾರ್ಥನಾ ಮಂದಿರಗಳ ಅರ್ಚಕರು) ಇರುತ್ತಾರೆ. ಹಿಂದು ಅರ್ಚಕರು ಮಾಡಿದ ಪಾಪಗಳನ್ನು ಮರೆಮಾಚಲು ಮುಸ್ಲಿಮರ ಮೇಲೆ ಆರೋಪ ಹೊರಿಸುತ್ತಾರೆ” ಎಂದು ಅಫ್ತಾಬು ದ್ದೀನ್ ಮುಲ್ಲಾ ಹೇಳಿದ್ದರು.
ಅವಹೇಳನಕಾರಿಯಾಗಿ ಮಾತನಾಡಿದ್ದ ಅಫ್ತಾಬ್ ವಿರುದ್ಧ ಗುವಾಹಟಿಯ ದೀಪಕ್ ಕುಮಾರ್ ದಾಸ್ ಎಂಬುವರು ಕೇಸ್ ದಾಖಲಿಸಿದ್ದರು.
“ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಗಳನ್ನು ಅಫ್ತಾಬುದ್ದೀನ್ ಮುಲ್ಲಾ ನೀಡಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದರು.