Wednesday, 4th December 2024

Assault Case: ಸ್ಕೂಲ್‌ ಬ್ಯಾಗ್‌ ಮರೆತು ಬಂದ ಬಾಲಕನನ್ನು ವಿವಸ್ತ್ರಗೊಳಿಸಿ ಕರೆಂಟ್‌ ಶಾಕ್‌ ಕೊಟ್ಟ ಪಾಪಿ ಶಿಕ್ಷಕ

assault case

ಲಕ್ನೋ: ಯಾದಗಿರಿಯಲ್ಲಿ ಕಡಿಮೆ ಅಂಕ ಬಂತೆಂದು ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಶಿಕ್ಷಕನೋರ್ವ ಮನಸೋಇಚ್ಚೇ ಥಳಿಸಿದ ಘಟನೆ(Assault Case) ಮಾಸುವ ಮುನ್ನವೇ ಉತ್ತರಪ್ರದೇಶದಲ್ಲಿ ಅಂತಹದ್ದೇ ಒಂದು ಘಟನೆ ವರದಿಯಾಗಿದೆ. ಶಾಲಾ ಚೀಲವನ್ನು ಮರೆತಿದ್ದಕ್ಕಾಗಿ ಪಾಪಿ ಶಿಕ್ಷಕನೋರ್ವ ಅಪ್ರಾಪ್ತ ಬಾಲಕನನ್ನು ವಿವಸ್ತ್ರಗೊಳಿಸಿ, ಕ್ರೂರವಾಗಿ ಥಳಿಸಿ ವಿದ್ಯುತ್ ಶಾಕ್ ನೀಡಿದ ಆಘಾತಕಾರಿ ಘಟನೆ ವರದಿಯಾಗಿದೆ.

ಉತ್ತರ ಪ್ರದೇಶದ ಅಲಿಗಢದಲ್ಲಿ ಈ ಭಯಾನಕ ಘಟನೆ ನಡೆದಿದೆ. ಏಳು ವರ್ಷದ ಬಾಲಕ ಅಳುತ್ತಾ ಮನೆಗೆ ಬಂದು ಘಟನೆಯ ಬಗ್ಗೆ ತಾಯಿಗೆ ತಿಳಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದ್ದು, ಪೋಷಕರು ಶಿಕ್ಷಕನ ವಿರುದ್ಧ ಪೊಲೀಸರು ದೂರು ನೀಡಿದ್ದಾರೆ. ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಯುಕೆಜಿ ವಿದ್ಯಾರ್ಥಿ ಮನೆಯಲ್ಲಿ ತನ್ನ ಶಾಲಾ ಚೀಲವನ್ನು ಮರೆತಿದ್ದಾನೆ ಎಂದು ಶಿಕ್ಷಕ ಅವನನ್ನು ನಿರ್ದಯವಾಗಿ ಥಳಿಸಿ ಕರೆಂಟ್‌ ಶಾಕ್‌ ನೀಡಿದ್ದಾನೆ ಎಂದು ಪೋಷಕರು ದೂರಿದ್ದಾರೆ.

ಬಾಲಕನ್ನು ವಿವಸ್ತ್ರಗೊಳಿಸಿ ಶಿಕ್ಷಕ ಮನಸ್ಸೋಇಚ್ಛೆ ಥಳಿಸಿದ್ದು ಮಾತ್ರವಲ್ಲದೇ ವಿದ್ಯುತ್‌ ಶಾಕ್‌ ಕೂಡ ನೀಡಿದ್ದಾರೆ. ಇದರಿಂದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಪೋಷಕರು ಶಾಲಾ ಆವರಣಕ್ಕೆ ತೆರಳಿ ಪ್ರತಿಭಟನೆ ನಡೆಸಿದ್ದಾರೆ. ಆದರೆ ಪೋಷಕರ ಆರೋಪವನ್ನು ಶಾಲಾ ಪ್ರಾಂಶುಪಾಲರು ತಿರಸ್ಕರಿಸಿದ್ದಾರೆ. ಇದು ಸುಳ್ಳು ಆರೋಪ, ಅದಕ್ಕೆ ಯಾವುದೇ ಆಧಾರ ಇಲ್ಲ. ಅಲ್ಲದೇ ಅಗತ್ಯವಿದ್ದಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸುವುದಾಗಿ ಪ್ರಾಂಶುಪಾಲರು ಪೊಲೀಸರಿಗೆ ಹೇಳಿದ್ದಾರೆ.

ಇಂತಹದ್ಧೇ ಒಂದು ಘಟನೆ ಕಳೆದ ತಿಂಗಳು ಯಾದಗಿರಿಯಲ್ಲಿ ನಡೆದಿತ್ತು. ಗಣಿತದಲ್ಲಿ ಕಡಿಮೆ ಅಂಕ ಪಡೆದ ನಾಲ್ಕನೇ ತರಗತಿಯ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಶಿಕ್ಷಕನೋರ್ವ ಬಾರಿಸಿದ್ದಾನೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಸೈದಾಪುರ ಪಟ್ಟಣದಲ್ಲಿ ಘಟನೆ ನಡೆದಿದ್ದು, ಶಿಕ್ಷಕನ ದುರ್ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಸೈದಾಪುರ ಪಟ್ಟಣದ ಖಾಸಗಿ ಶಾಲಾ ಶಿಕ್ಷಕ ಡೆಲವಿನ್‌ ಎಂಬಾತ ವಿದ್ಯಾರ್ಥಿಗಳ ಮೇಲೆ ಇದೇ ರೀತಿ ಕ್ರೌರ್ಯ ಮೆರೆಯುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಈತ ಕುಮಾರ್‌ ಯುವರಾಜ್‌ ಎಂಬ ಬಾಲಕನನ್ನು ಅಮಾನುಷವಾಗಿ ಥಳಿಸಿದ್ದಾನೆ. ಡೆಲವಿನ್‌ ವಿದ್ಯಾರ್ಥಿಯ ಬೆನ್ನಿಗೆ ಬಾಸುಂಡೆ ಬರುವಂತೆ ಥಳಿಸಿದ್ದಾನೆ ಎನ್ನಲಾಗಿದೆ. ಅಗಸ್ಟ್ 19 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿತ್ತು. ಇನ್ನು ಸೈದಾಪುರ ಠಾಣೆಯಲ್ಲಿ ಶಿಕ್ಷಕ ಡೆಲವಿನ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಕೆಲವು ದಿನಗಳ ಹಿಂದೆ ವಿಜಯನಗರಲ್ಲೂ ಇಂತಹದ್ದೇ ಒಂದು ಘಟನೆ ವರದಿಯಾಗಿತ್ತು. ಹೋಮ್‌ ವರ್ಕ್ (Home Work) ಮಾಡದಿದ್ದಕ್ಕೆ ವಿದ್ಯಾರ್ಥಿನಿಗೆ ಕಾಲು ಊತ ಬರುವಂತೆ ಮುಖ್ಯ ಶಿಕ್ಷಕಿ (Assault Case) ಬಾರಿಸಿದ್ದಾರೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದಲ್ಲಿರುವ ಕಸ್ತೂರಿ ಬಾ ಗಾಂಧಿ ಬಾಲಕಿಯರ ವಸತಿ ಶಾಲೆಯಲ್ಲಿ ಘಟನೆ ನಡೆದಿದೆ.

ವಿಜ್ಞಾನ ವಿಷಯದ ಹೋಂ ವರ್ಕ್ ಮಾಡದಿದ್ದಕ್ಕೆ ಮುಖ್ಯ ಶಿಕ್ಷಕಿ ವಾಣಿ ಎಂಬುವವರು ವಿದ್ಯಾರ್ಥಿನಿಗೆ ಮನಬಂದಂತೆ ಹೊಡೆದಿದ್ದಾರೆ. ಮಾನಸ ಎಂಬಾಕೆಗೆ ಈ ಮೊದಲು ಅಪಘಾತ ಆಗಿದ್ದರಿಂದ ಕಾಲಿಗೆ ರಾಡ್ ಅಳವಡಿಸಲಾಗಿತ್ತು. ಮತ್ತೆ ಅದೇ ಕಾಲಿಗೆ ಶಿಕ್ಷಕಿ ವಾಣಿ ಸ್ಕೇಲ್‌ನಿಂದ ಜೋರಾಗಿ ಹೊಡೆದಿದ್ದಾರೆ. ಜೋರಾಗಿ ಹೊಡೆತದಿಂದಾಗಿ ಕಾಲು ಊದಿಕೊಂಡು ಬಾಲಕಿಗೆ ನಡೆದಾಡುವುದಕ್ಕೂ ಸಾಧ್ಯವಾಗಿಲ್ಲ.

ಈ ಸುದ್ದಿಯನ್ನೂ ಓದಿ: Badlapur Assault Case: ಬದ್ಲಾಪುರ ಎನ್‌ಕೌಂಟರ್‌; ಪೊಲೀಸರ ವಾದ ನಂಬೋಕೆ ಸಾಧ್ಯವೇ ಇಲ್ಲ- ಹೈಕೋರ್ಟ್‌ ಫುಲ್‌ ಗರಂ