Wednesday, 20th November 2024

Assembly Elections 2024: ಮಹಾರಾಷ್ಟ್ರ, ಜಾರ್ಖಂಡ್‌ನಲ್ಲಿ ವೋಟಿಂಗ್‌ ಶುರು; 4 ರಾಜ್ಯಗಳ 15 ಕ್ಷೇತ್ರಗಳಲ್ಲಿ ಇಂದೇ ಉಪ ಚುನಾವಣೆ

maharashtra elections

ನವದೆಹಲಿ: ಇಂದು ಮಹಾರಾಷ್ಟ್ರ ಮತ್ತು ಜಾರ್ಖಂಡ್‌ ವಿಧಾನಸಭೆ ಚುನಾವಣೆಗೆ(Assembly Elections 2024) ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ಇದರ ಜತೆಗೆ ನಾಲ್ಕು ರಾಜ್ಯಗಳ 15 ವಿಧಾನಸಭಾ ಸ್ಥಾನಗಳಿಗೂ ಇಂದು ವೋಟಿಂಗ್‌ ನಡೆಯುತ್ತಿದೆ. ಮಹಾರಾಷ್ಟ್ರ ವಿಧಾನಸಭೆಯ ಎಲ್ಲಾ 288 ಸ್ಥಾನಗಳಿಗೆ ಮತ್ತು ಜಾರ್ಖಂಡ್‌ನ ಎರಡನೇ ಹಂತದ 38 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ. ಉತ್ತರಪ್ರದೇಶ ಜೊತೆಗೆ ಉತ್ತರಾಖಂಡ್‌ನ ಒಂದು ಸ್ಥಾನ, ಪಂಜಾಬ್‌ನ ನಾಲ್ಕು ಸ್ಥಾನಗಳು ಮತ್ತು ಕೇರಳದ ಒಂದು ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದೆ.

ಮಹಾರಾಷ್ಟ್ರದಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ಉಪ ಮುಖ್ಯಮಂತ್ರಿ ಡಿವೈ ಅಜಿತ್‌ ಪವಾರ್‌, ಸುಪ್ರಿಯಾ ಸುಳೆ, ನಟ ಅಕ್ಷಯ್‌ ಕುಮಾರ್‌ ಸೇರಿದಂತೆ ಹಲವರು ಬೆಳಗ್ಗೆಯೇ ಬಂದು ಮತದಾನ ಮಾಡಿದ್ದಾರೆ.

ಇದರೊಂದಿಗೆ ಮಹಾರಾಷ್ಟ್ರದ ನಾಂದೇಡ್ ಲೋಕಸಭಾ ಕ್ಷೇತ್ರಕ್ಕೂ ಉಪಚುನಾವಣೆ ನಡೆಯುತ್ತಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮತ್ತು ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಶಿವಸೇನೆ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಡುವಿನ ಒಡಕು ನಂತರ ಒಟ್ಟು 158 ಪಕ್ಷಗಳು ಚುನಾವಣಾ ಕಣದಲ್ಲಿವೆ.

ಅದೇ ಸಮಯದಲ್ಲಿ, ಜಾರ್ಖಂಡ್ ಚುನಾವಣೆಯ ಎರಡನೇ ಹಂತದಲ್ಲಿ, 38 ಸ್ಥಾನಗಳಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ (JMM) ನೇತೃತ್ವದ ಭಾರತ ಮೈತ್ರಿಕೂಟ ಮತ್ತು ಎನ್‌ಡಿಎ ನಡುವೆ ಪೈಪೋಟಿ ಇದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದ್ದು, ಸಂಜೆ 6ರವರೆಗೆ ನಡೆಯಲಿದೆ. ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಪ್ರಕಟವಾಗಲಿದೆ.

ಜಾರ್ಖಂಡ್​ನಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದೆ. ಇಲ್ಲಿ ಆಡಳಿತಾರೂಢ ಇಂಡಿಯಾ ಬ್ಲಾಕ್ ಮತ್ತು NDA ನಡುವೆ ಪೈಪೋಟಿ ಏರ್ಪಟ್ಟಿದೆ. ಜಾರ್ಖಂಡ್‌ನ ಒಟ್ಟು 81 ವಿಧಾನಸಭಾ ಸ್ಥಾನಗಳ ಪೈಕಿ 38 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ. ನವೆಂಬರ್ 23 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಈ ಸುದ್ದಿಯನ್ನೂ ಓದಿ: Maharashtra Election: ಮಹಾರಾಷ್ಟ್ರ ಚುನಾವಣೆ; ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ