Friday, 22nd November 2024

ಎನ್‌ಕೌಂಟರ್‌ನಲ್ಲಿ ಅತೀಕ್ ಅಹ್ಮದ್ ಗ್ಯಾಂಗ್ ನ ಶೂಟರ್‌ ಹತ್ಯೆ

ಕ್ನೊ: ವಿಶೇಷ ಕಾರ್ಯಾಚರಣೆ ಪಡೆ (ಎಸ್‌ಒಜಿ) ಮತ್ತು ಕೌಧಿಯಾರ ಪೊಲೀಸರ ಜಂಟಿ ತಂಡವು ಉಮೇಶ್ ಪಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅತೀಕ್ ಅಹ್ಮದ್ ಗ್ಯಾಂಗ್ ನ ಶೂಟರ್‌ನನ್ನು ಸೋಮವಾರ ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದೆ.

ಕೊಲೆಯಾದ ಶೂಟರ್ ಅನ್ನು ವಿಜಯ್ ಚೌಧರಿ ಅಲಿಯಾಸ್ ಉಸ್ಮಾನ್ (27) ಎಂದು ಗುರುತಿಸಲಾಗಿದ್ದು, ಧೂಮಂಗಂಜ್ ನಿವಾಸಿ. ಈತನಿಗಾಗಿ 50,000 ನಗದು ಬಹುಮಾನವನ್ನು ಘೋಷಿಸಲಾಗಿತ್ತು. ಎನ್‌ಕೌಂಟರ್‌ನಲ್ಲಿ ಒಬ್ಬ ಕಾನ್‌ಸ್ಟೆಬಲ್ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಪೊಲೀಸರ ಪ್ರಕಾರ ಫೆಬ್ರವರಿ 24 ರಂದು ಬಹುಜನ ಸಮಾಜ ಪಕ್ಷದ ಶಾಸಕ ರಾಜು ಪಾಲ್ ಅವರ ಹತ್ಯೆಯ ಪ್ರಮುಖ ಸಾಕ್ಷಿ ಉಮೇಶ್ ಪಾಲ್‌ಗೆ ಗುಂಡು ಗಳನ್ನು ಹಾರಿಸಿದ ಆರು ಶೂಟರ್‌ಗಳಲ್ಲಿ ಉಸ್ಮಾನ್ ಒಬ್ಬ.

“ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲಿ ಬೇಕಾಗಿರುವ ಅಪರಾಧಿಗಳು ಟ್ರಾನ್ಸ್-ಯಮುನಾ ಪಾಕೆಟ್‌ನಲ್ಲಿ ಆಶ್ರಯ ಪಡೆದಿದ್ದಾರೆ ಎಂಬ ಸುಳಿವಿನ ಮೇರೆಗೆ, ಎಸ್‌ಒಜಿ ಹಾಗೂ ಕೌಧಿಯಾರ ಪೊಲೀಸರ ಜಂಟಿ ತಂಡವು ಶೋಧ ಕಾರ್ಯಾಚರಣೆಯನ್ನು ಆರಂಭಿಸಿತು” ಎಂದು ಪ್ರಯಾಗರಾಜ್ ಪೊಲೀಸ್ ಕಮಿಷನರ್ ರಮಿತ್ ಶರ್ಮಾ ಹೇಳಿ ದ್ದಾರೆ.

ಪೊಲೀಸರೊಂದಿಗೆ ಗುಂಡಿನ ಚಕಮಕಿಯಲ್ಲಿ ಉಸ್ಮಾನ್ ಗಾಯಗೊಂಡನು. ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಅಲ್ಲಿ ಆತ ಮೃತ ಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು.

ಇದಕ್ಕೂ ಮೊದಲು, ಶೂಟೌಟ್‌ನಲ್ಲಿ ಭಾಗಿಯಾಗಿದ್ದ ಇನ್ನೊಬ್ಬ ಕ್ರಿಮಿನಲ್ ಅರ್ಬಾಝ್ ಕಳೆದ ವಾರ ಪೊಲೀಸ್ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟಿ ದ್ದಾನೆ.