Monday, 23rd September 2024

Atishi Marlena: ಮುಖ್ಯಮಂತ್ರಿ ಕುರ್ಚಿ ಖಾಲಿ ಬಿಟ್ಟ ಆತಿಶಿ; ಭರತನಂತೆ ಆಡಳಿತ ನಡೆಸುವೆ ಎಂದ ಡೆಲ್ಲಿ ಹೊಸ ಸಿಎಂ

athishi marlena

ನವದೆಹಲಿ: ದೆಹಲಿ ನೂತನ ಸಿಎಂ(Delhi CM) ಆಗಿ ನೇಮಕಗೊಂಡಿರುವ ಆಮ್‌ ಆದ್ಮಿ ಪಕ್ಷ(AAP)ದ ನಾಯಕ ಆತಿಶಿ ಮರ್ಲೇನಾ(Atishi Marlena) ಇಂದು ಅಧಿಕಾರ ಸ್ವೀಕರಿಸಿದ್ದಾರೆ. ತಮ್ಮ ಗುರು, ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್‌ ಮೇಲೆ ಅಪಾರ ಗೌರವವನ್ನಿಟ್ಟುಕೊಂಡಿರುವ ಆತಿಸಿ ಸಿಎಂ ಕುರ್ಚಿಯಲ್ಲಿ ಕೂರದೇ ಅದರ ಪಕ್ಕದಲ್ಲೇ ಮತ್ತೊಂದು ಕುರ್ಚಿಯಲ್ಲಿ ಕುಳಿತುಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅಲ್ಲದೇ ತಾವು ರಾಮಾಯಣದಲ್ಲಿ ಬರುವ ಭರತನಂತೆ ಆಡಳಿತ ನಡೆಸುವುದಾಗಿ ಹೇಳಿದ್ದಾರೆ.

ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಮಾಧ್ಯಮದವರ ಜತೆ ಮಾತನಾಡಿದ ಆತಿಶಿ, “ಭಗವಾನ್ ಶ್ರೀ ರಾಮನ ಪಾದುಕೆಯನ್ನು ಸಿಂಹಾಸನದಲ್ಲಿ ಇಟ್ಟು ಭರತ ಆಳ್ವಿಕೆ ಮಾಡಿದಂತೆ ನಾನು ದೆಹಲಿಯ ಮುಖ್ಯಮಂತ್ರಿಯಾಗಿ ನಾಲ್ಕು ತಿಂಗಳು ಕೆಲಸ ಮಾಡುತ್ತೇನೆ. ಅರವಿಂದ್ ಕೇಜ್ರಿವಾಲ್ ಅವರು ಅಧಿಕಾರದಿಂದ ಕೆಳಗಿಳಿಯುವ ಮೂಲಕ ರಾಜಕೀಯದಲ್ಲಿ ಘನತೆಗೆ ದೊಡ್ಡ ಉದಾಹರಣೆಯಾಗಿದ್ದಾರೆ. ಬಿಜೆಪಿ ತನ್ನ ಪ್ರತಿಷ್ಠೆಯನ್ನು ಹಾಳುಮಾಡಲು ಯಾವುದೇ ಕಲ್ಲನ್ನು ಬಿಡಲಿಲ್ಲ ಎಂದು ಹೇಳಿದರು.

ಆತಿಶಿ ಶಿಕ್ಷಣ, ಕಂದಾಯ, ಹಣಕಾಸು, ಇಂಧನ ಮತ್ತು ಲೋಕೋಪಯೋಗಿ ಇಲಾಖೆ ಸೇರಿದಂತೆ ಒಟ್ಟು 13 ಖಾತೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಮುಂದಿನ ಫೆಬ್ರುವರಿಯಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಕೇಜ್ರಿವಾಲ್‌ ಮತ್ತೆ ಅಧಿಕಾರಕ್ಕೆ ಬರಲಿದ್ದಾರೆ ಎಂಬ ಸಂಪೂರ್ಣ ಭರವಸೆ ನಮಗಿದೆ. ಸಿಎಂ ಕಚೇರಿ ಇರುವವರೆಗೂ ಅವರೇ ಸಿಎಂ ಆಗಿರುತ್ತಾರೆ ಎಂದು ಆತಿಶಿ ತಿಳಿಸಿದ್ದಾರೆ.

ತಿಹಾರ್‌ ಜೈಲಿನಿಂದ ಹೊರಬರುತ್ತಿದ್ದಂತೆ ಅರವಿಂದ ಕೇಜ್ರಿವಾಲ್‌ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಇದರ ಬೆನ್ನಲ್ಲೇ ಅವರು ಆತಿಶಿ ಅವರನ್ನು ಸಿಎಂ ಆಗಿ ಘೋಷಿಸಿದ್ದರು. ಶನಿವಾರವಷ್ಟೇ ಆತಿಶಿ ದೆಹಲಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಈ ಸುದ್ದಿಯನ್ನೂ ಓದಿ: Delhi Chief Minister : ಪ್ರಮಾಣ ವಚನ ಸ್ವೀಕರಿಸಿದ ಡೆಲ್ಲಿ ನೂತನ ಸಿಎಂ ಆತಿಶಿ