Thursday, 12th December 2024

Atishi Marlena: ಸೆ.21ರಂದು ಆತಿಶಿ ದೆಹಲಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ

athishi marlena

ನವದೆಹಲಿ: ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಬೆನ್ನಲ್ಲೇ ಆತಿಶಿ ಮರ್ಲೇನಾ(Atishi Marlena) ಅವರು ಶನಿವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಆಮ್‌ ಆದ್ಮಿ ಪಕ್ಷ(AAP) ಘೋಷಿಸಿದೆ. ಆರಂಭದಲ್ಲಿ ಕೇವಲ ಆತಿಶಿ ಮಾತ್ರ ಪ್ರಮಾಣ ವಚನ ಸ್ವೀಕರಿಸುವುದಾಗಿ ಆಪ್‌ ನಿರ್ಧರಿಸಿದ್ದು, ಇದೀಗ ಅವರ ಸಂಪೂರ್ಣ ಸಚಿವ ಸಂಪುಟವೇ ಪ್ರಮಾಣ ವಚನ ಸ್ವೀಕರಿಸುವುದಾಗಿ ಆಪ್‌ ಘೋಷಿಸಿದೆ.

ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಹಾಗೂ ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌(Arvind Kejriwal) ಅವರ ಉತ್ತರಾಧಿಕಾರಿಯಾಗಿ ರಾಜ್ಯ ಶಿಕ್ಷಣ ಮತ್ತು ಲೋಕೋಪಯೋಗಿ ಸಚಿವೆ ಆತಿಶಿ ಮರ್ಲೇನಾ(Atishi Marlena)ಆಯ್ಕೆಯಾಗಿದ್ದಾರೆ. ಸುಷ್ಮಾ ಸ್ವರಾಜ್‌ ಮತ್ತು ಶೀಲಾ ದೀಕ್ಷಿತ್‌ ಅವರ ನಂತರ ಆತಿಶಿ ದೆಹಲಿ ಮೂರನೇ ಮಹಿಳಾ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಂತರ ದೇಶದಲ್ಲಿ ಪ್ರಸ್ತುತ ಆಡಳಿತದಲ್ಲಿರುವ ಎರಡನೇ ಮಹಿಳಾ ಸಿಎಂ ಎಂಬ ಖ್ಯಾತಿ ಇವರದ್ದಾಗಿದೆ.

ಅಬಕಾರಿ ನೀತಿ ಹಗರಣದಲ್ಲಿ ಜಾಮೀನು ಪಡೆದು ಹೊರಬಂದ ಬೆನ್ನಲ್ಲೇ ಕೇಜ್ರಿವಾಲ್‌ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದರು. ಅವರ ಉತ್ತರಾಧಿಕಾರಿಯಾಗಿ ಇಂದು ಆತಿಶಿ ಮರ್ಲೇನಾ ಅವರನ್ನು ದೆಹಲಿ ಸಿಎಂ ಆಗಿ ಆಪ್‌ ನೇಮಿಸಿದೆ. ಇದೀಗ ಇದರ ಬೆನ್ನಲ್ಲೇ ಕೇಜ್ರಿವಾಲ್‌ ತಮ್ಮ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ ಸಕ್ಸೇನಾ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ

ಮಂಗಳವಾರ ಅರವಿಂದ್ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ, ಅತಿಶಿ ಹೊಸ ಸರ್ಕಾರವನ್ನು ಸ್ಥಾಪಿಸಲು ಮುಂದಾಗಿದ್ದು, ಹಣಕಾಸು, ಶಿಕ್ಷಣ ಮತ್ತು ಆದಾಯದಂತಹ 14 ಪೋರ್ಟ್‌ಫೋಲಿಯೊಗಳನ್ನು ನಿರ್ವಹಿಸುವುದು ಮತ್ತು ಅರವಿಂದ್ ಕೇಜ್ರಿವಾಲ್ ಅವರ ಜೈಲುವಾಸದ ಸಮಯದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ ಅನುಭವ ಇವರಿಗಿದೆ.

ಭಾನುವಾರ, ಕೇಜ್ರಿವಾಲ್ ತಮ್ಮ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುವಾಗ ರಾಜೀನಾಮೆ ನೀಡುವ ನಿರ್ಧಾರ ಘೋಷಿಸಿದ್ದರು. “ನಾನು 2 ದಿನಗಳ ನಂತರ ರಾಜೀನಾಮೆ ನೀಡಲಿದ್ದೇನೆ. ನಾನು ಪ್ರಾಮಾಣಿಕನೇ ಎಂದು ಜನರನ್ನು ಕೇಳಿ. ಅವರು ಪ್ರತಿಕ್ರಿಯಿಸುವವರೆಗೂ ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ. ಜನರು ನನಗೆ ಪ್ರಾಮಾಣಿಕತೆಯ ಪ್ರಮಾಣಪತ್ರವನ್ನು ನೀಡಿದ ನಂತರವೇ ನಾನು ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತೇನೆ. ಜೈಲಿನಿಂದ ಹೊರಬಂದ ನಂತರ ‘ಅಗ್ನಿಪರೀಕ್ಷೆ’ಗೆ ಒಳಪಡಲು ಬಯಸುತ್ತೇನೆ” ಎಂದು ನಾಯಕ ಹೇಳಿದ್ದರು.

ಈ ಸುದ್ದಿಯನ್ನೂ ಓದಿ: Atishi Marlena: ದೆಹಲಿಯ ಮೂರನೇ ಮಹಿಳಾ ಸಿಎಂ ಆಗಿರುವ ಆತಿಶಿ ಹಿನ್ನೆಲೆ ಏನು? ರಾಜಕೀಯ ಪಯಣ ಹೇಗೆ ಶುರುವಾಯ್ತು? ಇಲ್ಲಿದೆ ಡಿಟೇಲ್ಸ್‌