Friday, 22nd November 2024

Atishi Marlena: ʻಥ್ಯಾಂಕ್ಯೂ ಗುರುಗಳೇ…ʼ ನೂತನ ಸಿಎಂ ಆತಿಶಿ ಮೊದಲ ಪ್ರತಿಕ್ರಿಯೆ

athishi marlena

ನವದೆಹಲಿ: ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಬೆನ್ನಲ್ಲೇ ಆತಿಶಿ ಮರ್ಲೇನಾ(Atishi Marlena) ಅವರು ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌(Arvind Kejriwal) ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇಂಥಹ ಅತ್ಯುನ್ನತ ಜವಾಬ್ದಾರಿಯನ್ನು ತಮ್ಮ ಮೇಲೆ ಹೊರಿಸಿದ್ದಕ್ಕಾಗಿ ಧನ್ಯವಾದಗಳು ಗುರುಗಳೇ ಎಂದು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ನನಗೆ ಇಷ್ಟು ದೊಡ್ಡ ಜವಾಬ್ದಾರಿ ನೀಡಿದ ದೆಹಲಿಯ ಜನಪ್ರಿಯ ಸಿಎಂ, ನನ್ನ ಗುರು ಅರವಿಂದ್ ಕೇಜ್ರಿವಾಲ್ ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರೂ ಅವರನ್ನು ಸಿಎಂ ಮಾಡಲು ಆಪ್‌ನಿಂದ ಮಾತ್ರ ಸಾಧ್ಯ. ಸಿಎಂ ಆಗುವುದು ಎಎಪಿಯಲ್ಲಿ ಮಾತ್ರ ಸಾಧ್ಯ. ನಾನು ಸಾಮಾನ್ಯ ಕುಟುಂಬದಿಂದ ಬಂದವಳು. ನಾನು ಬೇರೆ ಯಾವುದೇ ಪಕ್ಷದಲ್ಲಿ ಇರುತ್ತಿದ್ದರೆ ನನಗೆ ಚುನಾವಣೆ ಟಿಕೆಟ್ ಕೂಡ ಸಿಗುತ್ತಿರಲಿಲ್ಲ ಎಂದಿದ್ದಾರೆ.

ಅರವಿಂದ್ ಕೇಜ್ರಿವಾಲ್ ನನ್ನ ಮೇಲೆ ನಂಬಿಕೆ ಇಟ್ಟು, ನನ್ನನ್ನು ಶಾಸಕಿ, ಸಚಿವೆಯನ್ನಾಗಿ ಮಾಡಿ, ಇಂದು ಸಿಎಂ ಆಗುವ ಜವಾಬ್ದಾರಿ ನೀಡಿದ್ದಾರೆ, ಅರವಿಂದ್ ಕೇಜ್ರಿವಾಲ್ ನನ್ನ ಮೇಲೆ ಇಷ್ಟೊಂದು ನಂಬಿಕೆ ಇಟ್ಟಿದ್ದಕ್ಕೆ ಖುಷಿಯಾಗಿದೆ. ಅದಕ್ಕಿಂತ ಹೆಚ್ಚು ಇಂದು ನನ್ನ ಸಹೋದರ ಕೇಜ್ರಿವಾಲ್‌ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಾರೆ. ಇದು ಅತ್ಯಂತ ದುಃಖದ ವಿಚಾರ ಎಂದಿದ್ದಾರೆ.

ಸ್ವಾತಿ ಮಲಿವಾಳ್‌ ಕಿಡಿ

ಆತಿಶಿ ಮರ್ಲೇನಾ ಸಿಎಂ ಆಗಿ ಆಯ್ಕೆಯಾಗಿರುವ ಬೆನ್ನಲ್ಲೇ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಳ್‌ ಅಸಮಾಧಾನ ಹೊರಹಾಕಿದ್ದಾರೆ. ದೆಹಲಿ ಪಾಲಿಗೆ ಇದು ಅತ್ಯಂತ ದುಃಖದ ದಿನ. ಭಯೋತ್ಪಾದಕ ಅಫ್ಜಲ್ ಗುರುವನ್ನು ರಕ್ಷಿಸಲು ದೀರ್ಘಕಾಲ ಹೋರಾಡಿದಂತಹ ವ್ಯಕ್ತಿ ಮುಖ್ಯಮಂತ್ರಿಯಾಗಿ ದೆಹಲಿಗೆ ಬರುತ್ತಿದ್ದಾರೆ. ಅಫ್ಜಲ್‌ ಗುರುವಿಗೆ ಕ್ಷಮಾದಾನ ನೀಡುವಂತೆ ಆಕೆಯ ಪೋಷಕರು ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದರು. ಅತಿಶಿ ಮರ್ಲೆನಾ ಸಿಎಂ ಆಗುತ್ತಾರೆ, ಆದರೆ ಅವರು ಕೇವಲ ಡಮ್ಮಿ ಸಿಎಂ ಆಗುತ್ತಾರೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Atishi Marlena: ದೆಹಲಿಯ ಮೂರನೇ ಮಹಿಳಾ ಸಿಎಂ ಆಗಿರುವ ಆತಿಶಿ ಹಿನ್ನೆಲೆ ಏನು? ರಾಜಕೀಯ ಪಯಣ ಹೇಗೆ ಶುರುವಾಯ್ತು? ಇಲ್ಲಿದೆ ಡಿಟೇಲ್ಸ್‌