Friday, 22nd November 2024

Atishi Marlena: ದೆಹಲಿಯ ಮೂರನೇ ಮಹಿಳಾ ಸಿಎಂ ಆಗಿರುವ ಆತಿಶಿ ಹಿನ್ನೆಲೆ ಏನು? ರಾಜಕೀಯ ಪಯಣ ಹೇಗೆ ಶುರುವಾಯ್ತು? ಇಲ್ಲಿದೆ ಡಿಟೇಲ್ಸ್‌

athishi marlena

ನವದೆಹಲಿ: ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಹಾಗೂ ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌(Arvind Kejriwal) ಅವರ ಉತ್ತರಾಧಿಕಾರಿಯಾಗಿ ರಾಜ್ಯ ಶಿಕ್ಷಣ ಮತ್ತು ಲೋಕೋಪಯೋಗಿ ಸಚಿವೆ ಆತಿಶಿ ಮರ್ಲೇನಾ(Atishi Marlena)ಆಯ್ಕೆಯಾಗಿದ್ದಾರೆ. ಸುಷ್ಮಾ ಸ್ವರಾಜ್‌ ಮತ್ತು ಶೀಲಾ ದೀಕ್ಷಿತ್‌ ಅವರ ನಂತರ ಆತಿಶಿ ದೆಹಲಿ ಮೂರನೇ ಮಹಿಳಾ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಂತರ ದೇಶದಲ್ಲಿ ಪ್ರಸ್ತುತ ಆಡಳಿತದಲ್ಲಿರುವ ಎರಡನೇ ಮಹಿಳಾ ಸಿಎಂ ಎಂಬ ಖ್ಯಾತಿ ಇವರದ್ದಾಗಿದೆ. ಹಾಗಿದ್ದರೆ ಈ ಆತಿಶಿ ಯಾರು? ಅವರ ರಾಜಕೀಯ ಜೀವನ ಹೇಗೆ ಶುರುವಾಯ್ತು ಎಂಬ ಬಗ್ಗೆ ಇಲ್ಲಿದೆ ಡಿಟೇಲ್‌ ವರದಿ.

ಬಹುತೇಕರಿಗೆ ಆತಿಶಿ ಮರ್ಲೇನಾ ಅಂದ್ರೆ ತಕ್ಷಣಕ್ಕೆ ತಿಳಿಯದೇ ಇರಬಹುದು. ಅವರು ಸಾಮಾನ್ಯವಾಗಿ ತಮ್ಮ ಹೆಸರಿನ ಮುಂದೆ ಉಪನಾಮ ಬಳಸುವುದೇ ಕಡಿಮೆ. ಹೀಗಾಗಿ ಆಕೆ ಆತಿಶಿ ಸಿಂಗ್‌ ಅಥವಾ ಆತಿಶಿ ಅಂತಾನೇ ಜನಪ್ರಿಯರು. 8 ಜೂನ್ 1981 ರಂದು ದೆಹಲಿಯಲ್ಲಿ ಜನಿಸಿದ ಅತಿಶಿ ಪಂಜಾಬಿ ರಾಜಪುರ ಕುಟುಂಬದಿಂದ ಬಂದವರು. ಅವರ ತಂದೆ ವಿಜಯ್ ಸಿಂಗ್ ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದು, ತಾಯಿ ತ್ರಿಪ್ತಾ ವಾಹಿ ಗೃಹಿಣಿ. ಅವರ ಗಂಡನ ಹೆಸರು ಪ್ರವೀಣ್ ಸಿಂಗ್, ಅವರು ಸಂಶೋಧಕರು ಮತ್ತು ಶಿಕ್ಷಣತಜ್ಞರಾಗಿದ್ದಾರೆ.

ಅತಿಶಿ ನವದೆಹಲಿಯ ಸ್ಪ್ರಿಂಗ್‌ಡೇಲ್ಸ್ ಶಾಲೆಯಲ್ಲಿ ಶಿಕ್ಷಣ ಆರಂಭಿಸಿ 2001 ರಲ್ಲಿ, ಅವರು ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಇತಿಹಾಸದಲ್ಲಿ ಪದವಿ ಪಡೆದರು. ಬಳಿಕ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಭಾರತಕ್ಕೆ ಮರಳಿದ ನಂತರ ಆಂಧ್ರಪ್ರದೇಶದ ರಿಷಿ ವ್ಯಾಲಿ ಶಾಲೆಯಲ್ಲಿ ಇತಿಹಾಸ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲಿ ಅವರು ಅನೇಕ ಎನ್‌ಜಿಒಗಳೊಂದಿಗೆ ಕೆಲಸ ಮಾಡಿದ್ದರು. ಹೀಗಾಗಿ ಅವರ ಒಲವು ನಿಧಾನವಾಗಿ ರಾಜಕೀಯದತ್ತ ಹೊರಳಿತ್ತು.

ಆಪ್‌ ಪಕ್ಷದ ತಳಮಟ್ಟದ ಕಾರ್ಯಕರ್ತರಾಗಿ ರಾಜಕೀಯ ರಂಗಕ್ಕೆ ಕಾಲಿಟ್ಟ ಆತಿಶಿ, ನಿಧಾನವಾಗಿ ಪಕ್ಷದಲ್ಲಿ ಗುರುತಿಸಿಕೊಳ್ಳಲು ಪ್ರಾರಂಭಿಸಿದರು. 2013ರಲ್ಲಿ ಆಪ್‌ ಸೇರ್ಪಡೆಯಾದ ಆತಿಶಿ, 2020ರಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆ ಎದುರಿಸಿ ಗೆಲುವು ಸಾಧಿಸಿದ್ದರು. 2023ರಲ್ಲಿ ಅಬಕಾರಿ ನೀತಿ ಹಗರಣದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಮನೀಷ್‌ ಸಿಸೋಡಿಯಾ ಅವರು ಅರೆಸ್ಟ್‌ ಬಳಿಕ ಆತಿಶಿ ಸಚಿವೆಯಾಗಿ ನೇಮಕಗೊಂಡಿದ್ದರು.

ಶೈಕ್ಷಣಿಕ ಸುಧಾರಣೆಗೆ ಒತ್ತು

ಶಿಕ್ಷಣ ಮತ್ತು ಲೋಕೋಪಯೋಗಿ ಸಚಿವೆಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಆತಿಶಿ ದೆಹಲಿಯಲ್ಲಿ ಶೈಕ್ಷಣಿಕ ಸುಧಾರಣೆಗೆ ಪನತೊಟ್ಟು ಕೆಲಸ ಮಾಡಿದರು. ಕೇಜ್ರಿವಾಲ್‌ ಸರ್ಕಾರದ ಪ್ರಮುಖ ಜನಾಕರ್ಷಣಾ ನೀತಿಯಾಗಿರುವ ಸರ್ಕಾರಿ ಶಾಲೆಗಳ ಸುಧಾರಣೆಯ ಪ್ರಮುಖ ರೂವಾರಿ ಆತಿಶಿ ಆಗಿದ್ದಾರೆ. ಇಷ್ಟೇ ಅಲ್ಲದೇ ದೆಹಲಿ ನೀರಿನ ಕೊರತೆ, ಮಹಿಳಾ ಸುರಕ್ಷತೆ ಬಗ್ಗೆ ದೊಡ್ಡಮಟ್ಟದಲ್ಲಿ ಧ್ವನಿ ಎತ್ತಿ ಕೇಂದ್ರ ಸರ್ಕಾರದ ಗಮನ ಸೆಳೆಯುವ ಮೂಲಕ ಆತಿಶಿ ಎಲ್ಲರನ್ನು ತಮ್ಮತ್ತ ಸೆಳೆದಿದ್ದರು.

ಕೇಜ್ರಿವಾಲ್‌, ಮನೀಷ್‌ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್‌ ಸೇರಿದಂತೆ ಪಕ್ಷದ ಪ್ರಮುಖರು ಭ್ರಷ್ಟಾಚಾರದ ಆರೋಪದಲ್ಲಿ ಜೈಲುಪಾಲಾದ ಸಂದರ್ಭದಲ್ಲಿ ಅತಂತ್ರವಾಗಿದ್ದ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿದ ಕೀರ್ತಿ ಆತಿಶಿಗೆ ಸಲ್ಲುತ್ತದೆ.

ಈ ಸುದ್ದಿಯನ್ನೂ ಓದಿ: Arvind Kejriwal : ಮಂಗಳವಾರ ಲೆಫ್ಟಿನೆಂಟ್‌ ಗವರ್ನರ್‌ ಭೇಟಿ ಮಾಡಲಿರುವ ಕೇಜ್ರಿವಾಲ್‌; ರಾಜೀನಾಮೆ ಸಾಧ್ಯತೆ