ಹೊಸದಿಲ್ಲಿ: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವಂಚನೆಯ ಪ್ರಕರಣ ಹೆಚ್ಚಾಗುತ್ತಿದೆ. ಜತೆಗೆ ಎಟಿಎಂ (ATM) ಕಾರ್ಡ್ ಬಳಸಿಯೂ ವಂಚಕರು ಗ್ರಾಹಕರ ಖಾತೆಯಿಂದ ಹಣ ದೋಚುತ್ತಾರೆ. ಹೀಗಾಗಿ ಎಟಿಎಂ ಹೆಸರು ಕೇಳಿದರೇನೇ ಕೆಲವರು ಬೆಚ್ಚಿ ಬೀಳುವಂತಾಗಿದೆ. ಇನ್ನು ಹಲವರು ಎಟಿಎಂ ಸಹವಾಸವೇ ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಾಗಿ ಈ ಸಮಸ್ಯೆ ನಿವಾರಣೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India) ಮುಂದಾಗಿದ್ದು, ಎಟಿಎಂನಿಂದ ಹಣ ಹಿಂಪಡೆಯುವ ನಿಯಮದಲ್ಲಿ ಕೆಲವೊಂದು ಬದಲಾವಣೆ ಜಾರಿಗೆ ತರಲಿದೆ. ವಂಚಕರಿಂದ ಜನ ಸಾಮಾನ್ಯರನ್ನು ರಕ್ಷಿಸಲು ಈ ಕ್ರಮಕ್ಕೆ ಮುಂದಾಗಿರುವುದಾಗಿ ಆರ್‌ಬಿಐ ತಿಳಿಸಿದ್ದು, ಶೀಘ್ರದಲ್ಲಿಯೇ ದೇಶಾದ್ಯಂತ ಜಾರಿಗೆ ಬರಲಿದೆ (ATM Cash Withdrawal Rules).
ಬದಲಾವಣೆ ಏನು?
ನಗದು ಮರುಪಾವತಿ ಸೌಲಭ್ಯ (Cash Refund Facility) ವನ್ನು ಪರಿಚಯಿಸಲು ಆರ್‌ಬಿಐ ಚಿಂತನೆ ನಡೆಸಿದೆ. ಅಂದರೆ ನೀವು ಕಾರ್ಡ್ ಇನ್‌ಸರ್ಟ್ ಮಾಡಿ, ಪಿನ್ ನಮೂದಿಸಿ ನಿರ್ದಿಷ್ಟ ಸಮಯದೊಳಗೆ ನಗದು ತೆಗೆದುಕೊಳ್ಳದಿದ್ದರೆ ಹಣ ಸ್ವಯಂಚಾಲಿತವಾಗಿ ಎಟಿಎಂ ಯಂತ್ರದೊಳಗೆ ಹೊರಟು ಹೋಗುತ್ತದೆ. ಬಳಿಕ ಆ ಹಣ ನಿಮ್ಮ ಖಾತೆಗೆ ಮರು ಪಾವತಿಯಾಗುತ್ತದೆ. ಈ ಸೌಲಭ್ಯ ಹಿಂದೆ ಲಭ್ಯವಿತ್ತು. ಆದರೆ ಈ ಸೌಲಭ್ಯ ದುರುಪಯೋಗವಾಗುವ ಬಗ್ಗೆ ವ್ಯಾಪಕ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ 2012ರಲ್ಲಿ ಇದನ್ನು ಆರ್‌ಬಿಐ ಹಿಂಪಡೆದುಕೊಂಡಿತ್ತು.
ಹೇಗೆ ಮೋಸ ನಡೆಯುತ್ತದೆ?
ವಂಚಕರು ನಕಲಿ ಕವರ್ ಬಳಸಿ ಎಟಿಎಂನ ನಗದು ಟ್ರೇಯನ್ನು ಸ್ಥಗಿತಗೊಳಿಸುತ್ತಾರೆ. ಇದರಿಂದಾಗಿ ಗ್ರಾಹಕರ ಹಣ ಮಧ್ಯದಲ್ಲೇ ಸಿಕ್ಕಿ ಹಾಕಿಕೊಳ್ಳುತ್ತದೆ. ವಹಿವಾಟು (Transaction) ವಿಫಲವಾಗಿದೆ ಎಂದು ಭಾವಿಸಿ ಗ್ರಾಹಕರು ಎಟಿಎಂ ಕೇಂದ್ರದಿಂದ ಹಿಂದಿರುಗಿದಾಗ ವಂಚಕರು ಒಳನುಗ್ಗಿ ಅಡ್ಡಲಾಗಿ ಇಟ್ಟಿದ್ದ ಕವರ್ ತೆಗೆದು ಹಣ ಪಡೆದುಕೊಳ್ಳುತ್ತಾರೆ.
ಆರ್‌ಬಿಐ ಹೇಳಿದ್ದೇನು?
ಈ ವಂಚನೆಯನ್ನು ತಡೆಗಟ್ಟಲು ಮತ್ತು ಗ್ರಾಹಕರಿಗೆ ಇನ್ನಷ್ಟು ಅನುಕೂಲ ಒದಗಿಸಲು ಆರ್‌ಬಿಐ ಎಲ್ಲ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ. ಅದರಂತೆ ಹಣದ ಮರುಪಾವತಿ ವ್ಯವಸ್ಥೆಯನ್ನು ಮರು ಜಾರಿಗೊಳಿಸುವಂತೆ ತಿಳಿಸಿದೆ. ತಂತ್ರಜ್ಞಾನವನ್ನು ಅಪ್‌ಡೇಟ್ ಮಾಡಿ ವಂಚನೆಯ ಪ್ರಕಣಕ್ಕೆ ಬ್ರೇಕ್ ಹಾಕುವಂತೆಯೂ ಸೂಚನೆ ನೀಡಿದೆ. ಎಟಿಎಂ ಯಂತ್ರಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆಗೆ ಆದೇಶಿಸಿದೆ. ಗ್ರಾಹಕರು ಹಣ ಪಡೆದುಕೊಳ್ಳಲು ಮರೆತರೆ ಅದು ವಂಚಕರ ಕೈಗೆ ಸಿಗದಂತೆ ನೋಡಿಕೊಳ್ಳಲು ಕಾರ್ಯ ಪ್ರವೃತ್ತರಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಹೇಳಿದೆ.
ಯಾವ ರೀತಿ ಸಹಾಯ ಮಾಡುತ್ತದೆ?
ಈ ಕ್ರಮ ಹಣ ಪಡೆದುಕೊಳ್ಳಲು ಮರೆತ ಗ್ರಾಹಕರಿಗೆ ಸಹಾಯ ಮಾಡುತ್ತದೆ. ಅಲ್ಲದೆ ಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದ ಸಂದರ್ಭದಲ್ಲಿಯೂ ಗ್ರಾಹಕರಿಗೆ ಯಾವುದೇ ರೀತಿಯ ನಷ್ಟ ಉಂಟಾಗುವುದಿಲ್ಲ. ವಂಚಕರಿಂದ ಗ್ರಾಹಕರ ಹಣವನ್ನು ರಕ್ಷಿಸುತ್ತದೆ ಎಂದು ಆರ್‌ಬಿಐ ತಿಳಿಸಿದೆ. ಬ್ಯಾಂಕ್‌ನಿಂದ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳುವಂತೆಯೂ ಗ್ರಾಹಕರಿಗೆ ಸೂಚಿಸಿದೆ.
ಈ ಸುದ್ದಿಯನ್ನೂ ಓದಿ: Interest Rate: ಫೆಬ್ರವರಿಯಲ್ಲಿ ನಿಮ್ಮ ಗೃಹ ಸಾಲ ಬಡ್ಡಿ ಇಳಿಕೆ? ಆರ್‌ಬಿಐನಿಂದ ಸಿಆರ್‌ಆರ್ ಕಟ್