ಮಹಾರಾಷ್ಟ್ರ: ಔರಂಗಾಬಾದ್ ಮತ್ತು ಉಸ್ಮಾನಾಬಾದ್ ನಗರಗಳ ಹೆಸರನ್ನು ಬದಲಾವಣೆ ಮಾಡಲಾಗಿದೆ.
ಔರಂಗಾಬಾದ್ ಗೆ ಛತ್ರಪತಿ ಸಂಭಾಜಿ ನಗರ ಎಂದು ಮತ್ತು ಒಸ್ಮಾನಾಬಾದ್ ನಗರಕ್ಕೆ ಧಾರಾಶಿವ ಎಂದೂ ಮರುನಾಮಕರಣ ಮಾಡಲಾಗಿದೆ. ಈ ಎರಡೂ ನಗರಗಳ ಮರು ನಾಮಕರಣ ಪ್ರಸ್ತಾಪವನ್ನು ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಅವರು ಕೇಂದ್ರ ಸರ್ಕಾರದ ಎದುರು ಇಟ್ಟಿದ್ದರು.
ಈ ಬಗ್ಗೆ ಟ್ವೀಟ್ ಮಾಡಿದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ‘ಔರಂಗಾಬಾದ್ ನಗರ ಛತ್ರಪತಿ ಸಂಭಾಜಿ ನಗರವಾಯಿತು. ಉಸ್ಮನಾಬಾದ್ ಇನ್ನುಂದೆ ಧಾರಶಿವ. ಈ ನಗರಗಳ ಮರುನಾಮಕರಣ ಅನುಮೋದಿಸಿದ್ದಕ್ಕೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದಗಳು. ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಅಂದುಕೊಂಡಿದ್ದನ್ನು ಸಾಧಿಸಿದೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಕೂಡ ಕೆಲವು ನಗರಗಳ ಹೆಸರು ಬದಲಾಗಿದೆ. ಇನ್ನು ಕೇಂದ್ರ ಸರ್ಕಾರವೂ ಸಹ ಬ್ರಿಟಿಷ್ ಕಾಲದ ಹೆಸರು ಗಳನ್ನು ಬದಲು ಮಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ ಔರಂಗಾಬಾದ್ ಮತ್ತು ಒಸ್ಮಾನಾಬಾದ್ ನಗರಗಳ ಹೆಸರು ಬದಲಾವಣೆ ಮಾಡಬೇಕು ಎಂದು ಮೊದಲು ಆಗ್ರಹಿಸಿದ್ದು ಶಿವಸೇನೆ ಸಂಸ್ಥಾಪಕ ಬಾಳ್ ಠಾಕ್ರೆ ಅವರು. ಆದರೆ ಅದು ಸಾಧ್ಯ ವಾಗಿರಲಿಲ್ಲ.
ಶಿವಸೇನೆ ಪಕ್ಷ ಕಾಂಗ್ರೆಸ್ ಮತ್ತು ಎನ್ ಸಿಪಿ ಜತೆ ಮೈತ್ರಿ ಮಾಡಿಕೊಂಡು ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿದ್ದಾಗ, 2022ರಲ್ಲಿ ನಡೆದಿದ್ದ ಕ್ಯಾಬಿನೆಟ್ ಸಭೆಯೊಂದರಲ್ಲಿ, ಈ ಎರಡು ನಗರಗಳ ಹೆಸರು ಬದಲಾವಣೆ ಪ್ರಸ್ತಾಪ ಇಟ್ಟಿದ್ದರು. ಆದರೆ ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಎನ್ ಸಿಪಿ ಸಹಮತ ಇರಲಿಲ್ಲ.
ಹಾಗಿದ್ದಾಗ್ಯೂ ಅವರು ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿ, ಅನುಮೋದನೆ ಕೇಳಿದ್ದರು. ಆದರೆ ಅಷ್ಟರಲ್ಲಿ ಅವರ ಮೈತ್ರಿ ಸರ್ಕಾರ ಪತನಗೊಂಡು, ಶಿವಸೇನೆ ಎರಡು ಬಣಗಳಾಯಿತು. ಅಂತೂ ಅಂದಿನ ಬಾಳ್ ಠಾಕ್ರೆ ಕನಸು ಈಗ ಈಡೇರಿದೆ.