ನವದೆಹಲಿ : ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ದೇಶಾದ್ಯಂತ 44 ಶಿಕ್ಷಕರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭಾನುವಾರ ಪ್ರತಿಷ್ಠಿತ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ವರ್ಚ್ಯುವಲ್ ಸಮಾವೇಶದ ಮೂಲಕ ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್, ತೆಲಂಗಾಣ, ಸಿಕ್ಕಿಂ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ಬಿಹಾರ ಮತ್ತು ತಮಿಳುನಾಡು ಸೇರಿದಂತೆ 10 ವಿವಿಧ ರಾಜ್ಯಗಳ ತಲಾ ಇಬ್ಬರು ಶಿಕ್ಷಕರಿಗೆ ರಾಷ್ಟ್ರಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ಪ್ರಶಸ್ತಿ ವಿಜೇತರಲ್ಲಿ ಮಮ್ತಾ ಪಾಲಿವಾಲ್ (ಜಿಜಿಎಸ್‌ಎಸ್‌ಎಸ್ ಭಿವಾನಿ, ಹರಿಯಾಣ), ಕಮಲ್ ಕಿಶೋರ್ ಶರ್ಮಾ (ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆ, ಕಂಡಘಾಟ್, ಹಿಮಾಚಲ ಪ್ರದೇಶ), ಜಗತಾರ್ ಸಿಂಗ್ (ಸರ್ಕಾರಿ ಪ್ರಾಥಮಿಕ ಶಾಲೆ, ಖಮಾನೊ, ಫತೇಘರ್ ಸಾಹಿಬ್, ಪಂಜಾಬ್), ಸಂಜೀವ್ ಕುಮಾರ್ ಶರ್ಮಾ, (ಸರ್ಕಾರಿ ಪ್ರಾಥಮಿಕ ಶಾಲೆ, ರೇಸಿ, ಜಮ್ಮು ಮತ್ತು ಕಾಶ್ಮೀರ) ಮತ್ತು ಮುಹಮ್ಮದ್ ಅಲಿ (ಸರ್ಕಾರಿ ಮಾಧ್ಯ ಮಿಕ ಶಾಲೆ, ಕಾರ್ಗಿಲ್, ಲಡಾಖ್) ಸೇರಿದ್ದಾರೆ.
ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಕೆಲಸ ಮಾಡುವ ಪ್ರತಿಭಾನ್ವಿತ ಶಿಕ್ಷಕರಿಗೆ ಸಾರ್ವಜನಿಕ ಮಾನ್ಯತೆ ನೀಡಲು ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಮಕ್ಕಳು ತಮ್ಮ ಶಾಲೆಗಳಲ್ಲಿ ಕಲಿಯಲು ಸಹಾಯ ಮಾಡುವ ಅವರ ನವೀನ ಮತ್ತು ವಿಶಿಷ್ಟ ಮಾರ್ಗಗಳನ್ನು ಮತ್ತು ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆಗಳನ್ನು ಶ್ಲಾಘಿಸುವ 44 ಪ್ರಶಸ್ತಿ ವಿಜೇತರನ್ನು ಒಳಗೊಂಡ ಸಾಕ್ಷ್ಯಚಿತ್ರ ವನ್ನು ಸಹ ತೋರಿಸಲಾಯಿತು.