Thursday, 21st November 2024

Axis My India Exit Polls: ಮಹಾರಾಷ್ಟ್ರದಲ್ಲಿ ಅಧಿಕಾರ ಯಾರಿಗೆ? ಆಕ್ಸಿಸ್‌ ಮೈ ಇಂಡಿಯಾದ ಚುನಾವಣೋತ್ತರ ಸಮೀಕ್ಷೆ ಹೇಳಿದ್ದಿದು

Axis My India Exit Polls

ಮುಂಬೈ: ಬಹು ನಿರೀಕ್ಷಿತ ಮಹಾರಾಷ್ಟ್ರ ವಿದಾನಸಭಾ ಚುನಾವಣೆಯ ಮತದಾನ ನಡೆದಿದ್ದು, ಫಲಿತಾಂಶ ಘೋಷಣೆಗೆ ದಿನಗಣನೆ ಆರಂಭವಾಗಿದೆ. ಇದೀಗ ಪ್ರದೀಪ್‌ ಗುಪ್ತಾ ಅವರ ಆಕ್ಷಿಸ್‌ ಮೈ ಇಂಡಿಯಾದ ಚುನಾವಣೋತ್ತರ ಸಮೀಕ್ಷೆ (Axis My India Exit Polls) ಪ್ರಕಟಗೊಂಡಿದ್ದು, ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ (Mahayuti alliance) ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಹೇಳಿದೆ. ಈ ಆಡಳಿತೂಢ ಮೈತ್ರಿಕೂಟ 288 ಸಂಖ್ಯಾಬಲದ ವಿಧಾನಸಭೆಯಲ್ಲಿ 178-200 ಕಡೆ ಜಯಗಳಿಸಲಿದೆ ಎಂದು ಊಹಿಸಿದೆ.

ಶಿವಸೇನೆ (ಯುಬಿಟಿ), ಕಾಂಗ್ರೆಸ್‌ ಮತ್ತು ಶರದ್‌ ಪವಾರ್‌ ಅವರ ಎನ್‌ಸಿಪಿ (ಎಸ್‌ಪಿ)ಯನ್ನೊಳಗೊಂಡ ಮಹಾ ವಿಕಾಸ್‌ ಅಘಾಡಿ (Maha Vikas Aghadi) ಮೈತ್ರಿಕೂಟ 82-102 ಸೀಟುಗಳಿಗೆ ಸೀಮಿತಗೊಳ್ಳಲಿದೆ ಎಂದು ಸಮೀಕ್ಷೆ ತಿಳಿಸಿದೆ. ಮಹಾಯುತಿ ಮೈತ್ರಿಕೂಟ ಶೇ. 48ರಷ್ಟು ವೋಟು ಪಡೆದುಕೊಂಡರೆ ವಿಪಕ್ಷಗಳಿಗೆ ಶೇ. 37ರಷ್ಟು ವೋಟು ಸಿಗಲಿದೆ.

ಪ್ರಾದೇಶಿಕವಾರು ಲೆಕ್ಕಾಚಾರ

ಮುಂಬೈ ಪ್ರದೇಶದ 36 ಸೀಟುಗಳ ಪೈಕಿ ಮಹಾಯುತಿ ಮೈತ್ರಿಕೂಟ ಶೇ. 45 ಮತ ಪಡೆದು 22 ಕಡೆ ಜಯಭೇರಿ ಬಾರಿಸಿದರೆ, ಮಹಾ ವಿಕಾಸ್‌ ಅಘಾಡಿ 14 ಕ್ಷೇತ್ರಗಳಿಗೆ ತೃಪ್ತಿಪಟ್ಟುಕೊಳ್ಳಲಿದೆ. ವಿದರ್ಭದ 62 ಕ್ಷೇತ್ರಗಳ ಪೈಕಿ ಮಹಾಯುತಿ ಮತ್ತು ಎಂವಿಎ ಕ್ರಮವಾಗಿ 39 ಮತ್ತು 20 ಸೀಟುಗಳಲ್ಲಿ ಜಯ ಗಳಿಸಲಿದೆ. ಕೊಂಕಣ ಮತ್ತು ಥಾಣೆಯ 39 ಸೀಟುಗಳಲ್ಲಿ ಮಹಾಯುತಿಗೆ 24 ಮತ್ತು ಎಂವಿಎಗೆ 13 ಕ್ಷೇತ್ರ ಒಲಿಯಲಿದೆ. ಉತ್ತರ ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವ ಸೇನೆ ಮತ್ತು ಎಸ್‌ಸಿಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ 47 ಕ್ಷೇತ್ರಗಳ ಪೈಕಿ ಬರೋಬ್ಬರಿ 38 ಕಡೆ ಗೆಲುವಿನ ನಗೆ ಬೀರಲಿದ್ದು, ವಿಪಕ್ಷಗಳ ಮೈತ್ರಿಕೂಟಕ್ಕೆ ಕೇವಲ 7 ಕಡೆ ಜಯ ಒಲಿಯಲಿದೆ ಎಂದು ಸಮೀಕ್ಷೆ ಹೇಳಿದೆ. ಪಶ್ಚಿಮ ಮಹಾರಾಷ್ಟ್ರದಲ್ಲಿಯೂ ಮಹಾ ವಿಕಾಸ್ ಅಘಾಡಿಗೆ ಆಘಾತ ಎದುರಾಗಲಿದೆ. ಅಲ್ಲಿ ಅದು 58 ಸ್ಥಾನಗಳಲ್ಲಿ 21 ಸ್ಥಾನಗಳನ್ನು ಗೆಲ್ಲಬಹುದು. ಮಹಾಯುತಿ 36 ಸ್ಥಾನಗಳಲ್ಲಿ ಗೆದ್ದು ಸಿಂಹಪಾಲನ್ನು ಪಡೆಯಲಿದೆ ಎಂದು ಊಹಿಸಲಾಗಿದೆ.

ಇತರ ಸಮೀಕ್ಷೆಗಳು ಹೇಳಿದ್ದೇನು?

ಬಹುತೇಕ ಸಮೀಕ್ಷೆಗಳು ಮಹಾಯುತಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದೇ ಊಹಿಸಿವೆ. ಪಿ-ಎಂಎಆರ್‌ಕ್ಯು (P-MARQ) ಸಮೀಕ್ಷೆಯಲ್ಲಿ ಮಹಾಯುತಿ ಸರ್ಕಾರ 137-157 ಕಡೆ ಜಯ ಗಳಿಸಿದರೆ, ಮಹಾ ವಿಕಾಸ ಆಘಾಡಿ 126-147 ಸೀಟು ಗಳಿಸಲಿದೆ. ಇತರರು 2-8 ಕಡೆ ಜಯ ದಾಖಲಿಸಬಹುದು ಎಂದು ಹೇಳಿದೆ.

ಮ್ಯಾಟ್ರಿಝ್‌ (Matrize) ಸಮೀಕ್ಷೆಯ ಪ್ರಕಾರ ಮಹಾಯುತಿಗೆ 150-170 ಮತ್ತು ಎಂವಿಎಗೆ 110-130 ಕ್ಷೇತ್ರ ಸಿಗಲಿದೆ. ಇತರರಿಗೆ 8-10 ಸೀಟು ದೊರೆಯುವ ಸಾಧ್ಯತೆ ಇದೆ. ಚಾಣಕ್ಯ (Chanakya) ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಮಹಾಯುತಿಗೆ 152-160 ಮತ್ತು ಎಂವಿಎಗೆ 130-138 ಸೀಟು ದೊರೆಯಲಿದೆ. ಮಹಾಯುತಿ 175-195 ಕಡೆ ವಿಜಯ ಪತಾಕೆ ಹಾರಿಸುವ ಮೂಲಕ ಭರ್ಜರಿ ಜಯ ದಾಖಲಿಸಿದರೆ ಮಹಾ ವಿಕಾಸ್ ಆಘಾಡಿ 85-112 ಸೀಟಿಗೆ ಸೀಮಿತಗೊಳ್ಳಲಿದೆ ಎಂದು ಪೀಪಲ್ಸ್‌ ಪಲ್ಸ್‌ (Peoples Pulse) ಭವಿಷ್ಯ ನುಡಿದಿದೆ. ಮಹಾರಾಷ್ಟ್ರದಲ್ಲಿ ಬಹುಮತಕ್ಕೆ ಅಗತ್ಯವಾದ ಮ್ಯಾಜಿಕ್‌ ನಂಬರ್‌ 145. ಶನಿವಾರ (ನ. 23) ಫಲಿತಾಂಶ ಹೊರ ಬೀಳಲಿದೆ.

ಈ ಸುದ್ದಿಯನ್ನೂ ಓದಿ: Exit poll Results 2024: ಮಹಾರಾಷ್ಟ್ರ, ಜಾರ್ಖಂಡ್‌ನಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಜಯ ಎಂದಿದೆ ಸಮೀಕ್ಷೆ!