Thursday, 21st November 2024

Ayushman Vaya Vandana Card: ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ; ಆಯುಷ್ಮಾನ್ ವಯ ವಂದನ ಕಾರ್ಡ್‌ ಪಡೆಯುವುದು ಹೇಗೆ?

Ayushman Vaya Vandana Card

ಸ್ಪರ್ಧೆ ಯಾವುದೇ ಇರಲಿ ಆರೋಗ್ಯ (Health) ಸರಿಯಾಗಿದ್ದರೆ ಮಾತ್ರ ಸ್ಪರ್ಧಿಸುವುದು ಸಾಧ್ಯ. ಜಾಗತಿಕ ಸ್ಪರ್ಧೆಯಲ್ಲೂ ಭಾರತ ದೇಶ ಪಾಲ್ಗೊಳ್ಳಬೇಕಾದರೆ ಇಲ್ಲಿನ ಜನರು ಆರೋಗ್ಯವಾಗಿರಬೇಕು. ಇದಕ್ಕಾಗಿ ಇತ್ತೀಚಿನ ಕೆಲವು ವರ್ಷಗಳಲ್ಲಿ ಸರ್ಕಾರ ಹಲವಾರು ಆರೋಗ್ಯ ಯೋಜನೆಗಳನ್ನು ಪರಿಚಯಿಸಿದೆ. ಇದರಲ್ಲಿ ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ (Ayushman Bharat Pradhan Mantri Jan Arogya Yojana) ಕೂಡ ಒಂದು. ಈ ಯೋಜನೆ ಅಡಿಯಲ್ಲಿ ಹಿರಿಯ ನಾಗರಿಕರಿಗಾಗಿ (Senior citizens) ಆಯುಷ್ಮಾನ್ ವಯ ವಂದನಾ ಕಾರ್ಡ್ (Ayushman Vaya Vandana Card) ಅನ್ನು ಪರಿಚಯಿಸಲಾಗಿದೆ.

ಆಯುಷ್ಮಾನ್ ವಯ ವಂದನ ಕಾರ್ಡ್ 2024 ಅನ್ನು ಹೊಂದಿರುವ ಯಾವುದೇ ವ್ಯಕ್ತಿಯು ಅಕ್ಟೋಬರ್ 29ರಿಂದ ಅಯುಷ್ಮಾನ್ ಭರತ್ ಪಿಎಂ-ಜೆಎವೈ ಗೆ ಸಂಯೋಜಿತವಾಗಿರುವ ಯಾವುದೇ ಆಸ್ಪತ್ರೆಯಲ್ಲಿ 5 ಲಕ್ಷ ರೂ. ವರೆಗಿನ ಉಚಿತ ವೈದ್ಯಕೀಯ ಸೇವೆಗಳನ್ನು ಪಡೆಯಬಹುದಾಗಿದೆ.

ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆಯ ಮೂಲಕ ಕೇಂದ್ರ ಸರ್ಕಾರವು 70 ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ವ್ಯಕ್ತಿಗಳಿಗೆ (ayushman bharat for senior citizens) ಅವರ ಆದಾಯವನ್ನು ಲೆಕ್ಕಿಸದೆ ಆರೋಗ್ಯ ರಕ್ಷಣೆ ಕಾರ್ಯಕ್ರಮವನ್ನು ವಿಸ್ತರಿಸಿದೆ. ಈ ಯೋಜನೆಯಡಿಯಲ್ಲಿ ದೇಶಾದ್ಯಂತ 70 ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಹಿರಿಯ ನಾಗರಿಕರು ಅಗತ್ಯ ಆಸ್ಪತ್ರೆ ಚಿಕಿತ್ಸೆಗೆ ಅರ್ಹರಾಗಿರುತ್ತಾರೆ.

ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯು ಭಾರತೀಯ ಜನಸಂಖ್ಯೆಯ ಶೇ. 40ರಷ್ಟು ಮಂದಿಗೆ ಆರೋಗ್ಯ ವಿಮಾ ರಕ್ಷಣೆಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ.

ಕಳೆದ ಸೆಪ್ಟೆಂಬರ್‌ನಲ್ಲಿ 70 ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರನ್ನು ಈ ಯೋಜನೆಗೆ ಸೇರಿಸಲು ಸರ್ಕಾರವು ಯೋಜನೆ ಸೌಲಭ್ಯದ ವಿಸ್ತರಣೆಯನ್ನು ಘೋಷಿಸಿತು. ಇದರ ಅಡಿಯಲ್ಲಿ ಅರ್ಹ ವ್ಯಕ್ತಿಗಳು ತಮ್ಮ ಸಾಮಾಜಿಕ- ಆರ್ಥಿಕ ಹಿನ್ನೆಲೆಯನ್ನು ಲೆಕ್ಕಿಸದೆ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಡಿ 5 ಲಕ್ಷ ರೂ. ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಬಹುದು.

ಆಯುಷ್ಮಾನ್ ವಯ ವಂದನಾ ಕಾರ್ಡ್‌ಗೆ ಆನ್‌ಲೈನ್, ಆಫ್‌ಲೈನ್‌ ಮೂಲಕವೂ ಅರ್ಜಿ ಸಲ್ಲಿಸಬಹುದು.

ಯಾರು ಅರ್ಹರು?

ಆಯುಷ್ಮಾನ್ ವಯ ವಂದನಾ ಕಾರ್ಡ್‌ ಪಡೆಯಲು ಅರ್ಜಿದಾರರು ಭಾರತದ ಪ್ರಜೆಯಾಗಿರಬೇಕು, 70 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು, ಈ ಯೋಜನೆಗೆ ಯಾವುದೇ ಆದಾಯದ ಮಾನದಂಡಗಳಿಲ್ಲ.

ಅಗತ್ಯ ದಾಖಲೆಗಳು

ಆಯುಷ್ಮಾನ್ ವಯ ವಂದನಾ ಕಾರ್ಡ್‌ ಪಡೆಯಲು ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ವಯಸ್ಸಿನ ಪುರಾವೆ, ಕೆವೈಸಿ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿ ಆಯುಷ್ಮಾನ್ ವಯ ವಂದನಾ ಕಾರ್ಡ್ ಅಪ್ಲಿಕೇಶನ್ ಅನ್ನು ತುಂಬಿ. ಇದರ ದೃಢೀಕರಣಕ್ಕಾಗಿ ಒಟಿಪಿ ಪಡೆಯಲು ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ಬಳಿಕ ರಾಜ್ಯ, ಜಿಲ್ಲೆ, ಆಧಾರ್ ಸಂಖ್ಯೆ, ಪಿಎಂಜೆಎವೈ ಕಾರ್ಯಕ್ರಮದ ಹೆಸರು, ಪಿಎಂಜೆಎವೈ ಐಡಿ ಅಥವಾ ಕುಟುಂಬ ಐಡಿಯಂತಹ ನಿರ್ದಿಷ್ಟ ವಿವರಗಳನ್ನು ಒದಗಿಸಿ.

ಬಳಿಕ ಕೆವೈಸಿ ಮಾಹಿತಿಗಳನ್ನು ಪೂರೈಸಿ. ಇತ್ತೀಚಿನ ಛಾಯಾಚಿತ್ರವನ್ನು ಅಪ್‌ಲೋಡ್ ಮಾಡಲು ಆಧಾರ್ ಒಟಿಪಿ ಅನ್ನು ಬಳಸಿ. ಅನಂತರ ಕೇಳುವ ಗ್ರಾಮ, ಜಿಲ್ಲೆ, ಪಿನ್ ಕೋಡ್, ಮೊಬೈಲ್ ಸಂಖ್ಯೆ ಮತ್ತು ಜನ್ಮ ದಿನಾಂಕದಂತಹ ಹೆಚ್ಚುವರಿ ವಿವರಗಳನ್ನು ಸೇರಿಸಿ.

ಎಲ್ಲಾ ಮಾಹಿತಿಯನ್ನು ನಮೂದಿಸಿದ ಅನಂತರ ಅರ್ಜಿಯನ್ನು ಅಂತಿಮಗೊಳಿಸಲು “ಸಲ್ಲಿಸು” ಕ್ಲಿಕ್ ಮಾಡಿ. ಬಳಿಕ ಅನುಮೋದಿಸಿದ ಅನಂತರ ಅದನ್ನು ಡೌನ್‌ಲೋಡ್ ಮಾಡಿ ಬಳಸಿಕೊಳ್ಳಬಹುದು.

ಆಫ್‌ಲೈನ್ ಪ್ರಕ್ರಿಯೆ

ಆಯುಷ್ಮಾನ್ ವಯ ವಂದನಾ ಕಾರ್ಡ್‌ ಅನ್ನು ಆಫ್‌ಲೈನ್ ಮೂಲಕವೂ ಪಡೆದುಕೊಳ್ಳಬಹುದು. ಇದಕ್ಕಾಗಿ ಹತ್ತಿರದ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ (HWC) ಅಥವಾ ಸಾಮಾನ್ಯ ಸೇವಾ ಕೇಂದ್ರಕ್ಕೆ (CSC) ಭೇಟಿ ನೀಡಿ.

ಗುರುತಿನ ಪರಿಶೀಲನೆಗಾಗಿ ಪಡಿತರ ಚೀಟಿಯಂತಹ ಕುಟುಂಬ ಸಂಬಂಧಿತ ಪುರಾವೆಗಳನ್ನು ಒದಗಿಸಿ. ಆಧಾರ್ ಕಾರ್ಡ್‌ನಂತಹ ಅಗತ್ಯ ದಾಖಲೆಗಳನ್ನು ಸಲ್ಲಿಸಿ.

ನೋಂದಣಿ ಸಮಯದಲ್ಲಿ ಗುರುತಿನ ನಿಖರವಾದ ಪರಿಶೀಲನೆಗೆ ಯುಐಡಿ ಕಾರ್ಡ್ ಬಳಸಿ ಬಯೋಮೆಟ್ರಿಕ್ ದೃಢೀಕರಣವನ್ನು ನಡೆಸಲಾಗುತ್ತದೆ.

Pawan Kalyan: ಸನಾತನ ಧರ್ಮವಿಲ್ಲದೆ ಈ ದೇಶ ಇಲ್ಲ.. ಪಕ್ಷದ ಹೊಸ ವಿಂಗ್‌ ಘೋಷಣೆ ಮಾಡಿದ ಪವನ್‌ ಕಲ್ಯಾಣ್‌!

ಏನು ಪ್ರಯೋಜನ?

ಆಯುಷ್ಮಾನ್ ವಯ ವಂದನಾ ಕಾರ್ಡ್‌ ಹೊಂದಿರುವ ಹಿರಿಯ ನಾಗರಿಕರು ತಮ್ಮ ವೈದ್ಯಕೀಯ ಅಗತ್ಯಗಳಿಗಾಗಿ 5 ಲಕ್ಷ ರೂ. ವರೆಗಿನ ವಿಶೇಷ ಸೌಲಭ್ಯಗಳನ್ನು ಪಡೆಯಬಹುದು.

ಆರೋಗ್ಯ ವಿಮಾ ಕಾರ್ಯಕ್ರಮ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯು ಹಿರಿಯ ನಾಗರಿಕರಿಗೆ ಆಸ್ಪತ್ರೆಯ ತಂಗುವಿಕೆ, ಶಸ್ತ್ರಚಿಕಿತ್ಸೆ ಮತ್ತು ರೋಗನಿರ್ಣಯ ಪರೀಕ್ಷೆಗಳು ಸೇರಿದಂತೆ ವೈದ್ಯಕೀಯ ಸೇವೆಗಳ ಸಮಗ್ರ ಪ್ಯಾಕೇಜ್ ಅನ್ನು ಒದಗಿಸುತ್ತದೆ. ಅರ್ಹ ಹಿರಿಯರು ದೇಶಾದ್ಯಂತ ಇರುವ 29,000 ಕ್ಕೂ ಹೆಚ್ಚು ಅಧಿಕೃತ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆಯನ್ನು ಪಡೆಯಬಹುದು.