Saturday, 14th December 2024

Baba Siddique:`ಸಿದ್ದಿಕಿ ಹತ್ಯೆ ಮಾಡಿದ್ದು ನಾವೇ, ಕಾರಣ ಏನಪ್ಪ ಅಂದ್ರೆ..ʼ ಹೊಣೆ ಹೊತ್ತುಕೊಂಡ ಬಿಷ್ಣೋಯ್‌ ಗ್ಯಾಂಗ್‌

baba siddiqui

ಮುಂಬೈ: ಶೂಟೌಟ್‌ನಲ್ಲಿ ದಾರುಣವಾಗಿ ಸಾವನ್ನಪ್ಪಿರುವ ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ನಾಯಕ ಬಾಬಾ ಸಿದ್ದಿಕಿ(Baba Siddique) ಹತ್ಯೆ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ. ಬಾಲಿವುಡ್ ನಟ ಸಲ್ಮಾನ್ ಖಾನ್, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಅನುಜ್ ಥಾಪನ್ ಜೊತೆಗಿನ ಸಿದ್ದಿಕಿ ನಂಟು ಈ ಕೊಲೆಗೆ ಕಾರಣ ಎಂದು ಗ್ಯಾಂಗ್ ಸದಸ್ಯನೊಬ್ಬನ ಫೇಸ್ ಬುಕ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು, ಅದು ಇದೀಗ ಇದೀಗ ವೈರಲ್ ಆಗಿದೆ.

ಪೋಸ್ಟ್‌ನಲ್ಲಿ, ಗ್ಯಾಂಗ್ ಸದಸ್ಯ “ಓಂ, ಜೈ ಶ್ರೀ ರಾಮ್, ಜೈ ಭಾರತ್” ಎಂದು ಬರೆದಿದ್ದು, ನಾನು ಜೀವನದ ಸಾರವನ್ನು ಅರ್ಥಮಾಡಿಕೊಂಡಿದ್ದೇನೆ. ಸಂಪತ್ತು ಮತ್ತು ದೇಹವನ್ನು ಧೂಳಿನಂತೆ ಪರಿಗಣಿಸುತ್ತೇನೆ. ನಾನು ಸರಿಯಾದದ್ದನ್ನು ಮಾತ್ರ ಮಾಡಿದ್ದೇನೆ, ಕರ್ತವ್ಯವನ್ನು ಗೌರವಿಸುತ್ತೇನೆ ಎಂದು ಹೇಳಿದ್ದಾನೆ.

ಸಲ್ಮಾನ್ ಖಾನ್, ನಾವು ಈ ಯುದ್ಧವನ್ನು ಬಯಸಲಿಲ್ಲ, ಆದರೆ ನೀವು ನಮ್ಮ ಸಹೋದರನನ್ನು ಅವನ ಪ್ರಾಣ ಕಳೆದುಕೊಳ್ಳುವಂತೆ ಮಾಡಿದ್ದೀರಿ. ಇಂದು ಬಾಬಾ ಸಿದ್ದಿಕ್ ಅವರ ಸಭ್ಯತೆಯ ಕೊಳ ಮುಚ್ಚಲ್ಪಟ್ಟಿದೆ ಅಥವಾ ಒಂದು ಕಾಲದಲ್ಲಿ ಅವರು MCOCA (ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ) ಅಡಿಯಲ್ಲಿದ್ದರು. ಭೂಗತ ಪಾತಕಿ ದಾವೂದ್ ಮತ್ತು ಅನುಜ್ ಥಾಪನ್‌ ನೊಂದಿಗೆ ಸಂಪರ್ಕವೇ ಸಿದ್ದಿಕಿ ಹತ್ಯೆಗೆ ಕಾರಣ ಎಂದು ಬಿಷ್ಣೋಯ್‌ ಗ್ಯಾಂಗ್‌ ಸದಸ್ಯ ಬರೆದುಕೊಂಡಿದ್ದಾನೆ.

ಇನ್ನು ಸಿದ್ದಿಕಿ ಹತ್ಯೆ ಬೆನ್ನಲ್ಲೇ ಬಿಷ್ಣೋಯ್‌ ಗ್ಯಾಂಗ್‌ ಹಿಟ್‌ ಲಿಸ್ಟ್‌ನಲ್ಲಿರುವ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರಿ ಭದ್ರತೆಯನ್ನೂ ಹೆಚ್ಚಿಸಲಾಗಿದೆ.

ದಾಳಿಗೆ ಸಂಬಂಧಿಸಿದಂತೆ ಕರ್ನೈಲ್ ಸಿಂಗ್ ಮತ್ತು ಧರ್ಮರಾಜ್ ಕಶ್ಯಪ್ ಎಂದು ಗುರುತಿಸಲಾದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಅವರು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌(Bishnoi Gang)ಗೆ ಸೇರಿದವರು ಎಂದು ಹೇಳಿಕೊಂಡಿದ್ದಾರೆ. ಪ್ರಕರಣದ ಮೂರನೇ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಳೆದ ಒಂದು ತಿಂಗಳಿನಿಂದ ಸಿದ್ದಿಕ್ ನ ಚಲನವಲನಗಳ ಮೇಲೆ ನಿಗಾ ಇರಿಸಿದ್ದೇವೆ ಎಂದು ಇಬ್ಬರು ಆರೋಪಿಗಳು ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಬಾಂದ್ರಾ ಪೂರ್ವದಲ್ಲಿರುವ ಅವರ ಮಗ ಮತ್ತು ಮಹಾರಾಷ್ಟ್ರ ಶಾಸಕ ಜೀಶನ್ ಸಿದ್ದಿಕ್ ಅವರ ಕಚೇರಿಯ ಹೊರಗೆ ರಾತ್ರಿ 9.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ದಸರಾ ಸಂದರ್ಭದಲ್ಲಿ ಸಿದ್ದಿಕ್ ಪಟಾಕಿ ಸಿಡಿಸುತ್ತಿದ್ದ ವೇಳೆ ಮುಖವನ್ನು ಕರವಸ್ತ್ರದಿಂದ ಮುಚ್ಚಿಕೊಂಡು ಬಂದಿದ್ದು, ಹೊರ ಬಂದ ಮೂವರು ದುಷ್ಕರ್ಮಿಗಳು, 9.9 ಎಂಎಂ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಅದರಲ್ಲಿ ಒಂದು ಗುಂಡು ಸಿದ್ದಿಕಿಯ ಎದೆಗೆ ಬಡಿದು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಬಾಬಾ ಸಿದ್ದೀಕಿ ಯಾರು?

ಸೆಪ್ಟೆಂಬರ್ 13, 1959 ರಂದು ಬಿಹಾರ ಪಾಟ್ನಾದಲ್ಲಿ ಜನಿಸಿದ ಬಾಬಾ ಸಿದ್ದಿಕಿ ಮುಂಬೈನಲ್ಲಿ ಬೆಳೆದವರು. 1977ರಲ್ಲಿ ಹದಿಹರೆಯದವರಾಗಿದ್ದಾಗ ಕಾಂಗ್ರೆಸ್ ಸೇರಿಕೊಂಡಿದ್ದರು. ಸ್ಥಳೀಯ ಮತದಾರರೊಂದಿಗೆ ಬಲವಾದ ಸಂಪರ್ಕದಿಂದಾಗಿ ಅವರು ಶೀಘ್ರವಾಗಿ ರಾಜಕೀಯ ಯಶಸ್ಸು ಗಳಿಸಿದ್ದರು.

ಬಾಬಾ ಸಿದ್ದೀಕ್ 1980 ರಲ್ಲಿ ಬಾಂದ್ರಾ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾದರು. ಮುಂದಿನ ಎರಡು ವರ್ಷಗಳಲ್ಲಿ ಅದರ ಮುಖ್ಯಸ್ಥರಾಗಿ ಆಯ್ಕೆಯಾದರು. 1988 ರಲ್ಲಿ, ಅವರು ಮುಂಬೈ ಯುವ ಕಾಂಗ್ರೆಸ್ ಅಧ್ಯಕ್ಷರಾದರು ಮತ್ತು 1992 ರಲ್ಲಿ ಪುರಸಭೆಯ ಕೌನ್ಸಿಲರ್ ಆಗಿ ಆಯ್ಕೆಯಾದರು.

1999ರಲ್ಲಿ, ಸಿದ್ದೀಕ್ ಬಾಂದ್ರಾ ಪಶ್ಚಿಮ ಕ್ಷೇತ್ರದಿಂದ ವಿಧಾನಸಭೆಯ ಶಾಸಕ ತಮ್ಮ ಮೊದಲ ಚುನಾವಣೆಯಲ್ಲಿ ಗೆದ್ದರು. ಅವರ ತಳಮಟ್ಟದಲ್ಲಿ ಭಾರೀ ಬೆಂಬಲ ಮತ್ತು ನಾನಾ ಸಮುದಾಯಗಳಿಂದ ಮತದಾರರನ್ನು ಒಟ್ಟುಗೂಡಿಸುವ ಸಾಮರ್ಥ್ಯದ ಪರಿಣಾಮವಾಗಿ ಅವರಿಗೆ ಗೆಲವು ಸುಲಭವಾಗಿತ್ತು ಅವರು ಸತತ ಮೂರು ಬಾರಿ ಬಾಂದ್ರಾ ಪಶ್ಚಿಮವನ್ನು ಪ್ರತಿನಿಧಿಸಿದರು, 2014 ರವರೆಗೆ ಈ ಸ್ಥಾನವನ್ನು ಅಲಂಕರಿಸಿದ್ದರು.

ಶಾಸಕರಾಗಿದ್ದ ಅವಧಿಯಲ್ಲಿ, ಸಿದ್ದೀಕ್ ಅವರು ತಮ್ಮ ಕ್ಷೇತ್ರದ ಮೂಲಸೌಕರ್ಯಗಳನ್ನು ಸುಧಾರಿಸಲು, ಕೊಳೆಗೇರಿ ಪುನರ್ವಸತಿ, ಆರೋಗ್ಯ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲು ಮತ್ತು ಶಿಕ್ಷಣ ಸಂಸ್ಥೆಗಳನ್ನು ಹೆಚ್ಚಿಸಲು ವ್ಯಾಪಕವಾಗಿ ಕೆಲಸ ಮಾಡಿದರು. ಹೀಗಾಗಿ ಅವರಿಗೆ ಹೆಚ್ಚಿನ ಜನಬೆಂಬಲವಿತ್ತು.

ಈ ಸುದ್ದಿಯನ್ನೂ ಓದಿ: Baba Siddique: ಸಕಲ ಸರ್ಕಾರಿ ಗೌರವದೊಂದಿಗೆ ಸಿದ್ದಿಕಿ ಅಂತ್ಯಕ್ರಿಯೆ; ಶಿಂಧೆ ಸರ್ಕಾರ ಘೋಷಣೆ- ಮೂರನೇ ಆರೋಪಿಗಾಗಿ ತಲಾಶ್‌