ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಅವರನ್ನು (Baba Siddique murder case) ಅಕ್ಟೋಬರ್ 12 ರಂದು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಮುಂಬೈ ಪೊಲೀಸರು ಈ ಪ್ರಕರಣದಲ್ಲಿ ಇದುವರೆಗೆ 18 ಆರೋಪಿಗಳನ್ನು ಬಂಧಿಸಿದ್ದಾರೆ. 18 ಆರೋಪಿಗಳ ಪೈಕಿ ನಾಲ್ವರು ಆರೋಪಿಗಳು ಪೊಲೀಸರ ವಿಚಾರಣೆ ವೇಳೆ ಪ್ರಮುಖ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಈ ನಾಲ್ವರು ಆರೋಪಿಗಳಿಗೆ 25 ಲಕ್ಷ ರೂ., ಕಾರು, ಫ್ಲ್ಯಾಟ್ ಹಾಗೂ ದುಬೈ ಪ್ರವಾಸದ ಭರವಸೆ ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದರ ನಡುವೆ ಕೊಲೆ ಸಂಚಿನಲ್ಲಿ ಪಾತ್ರವಹಿಸಿದ್ದ ಆರೋಪದ ಮೇರೆಗೆ ಪುಣೆ ನಿವಾಸಿಗಳಿಬ್ಬರನ್ನು ನಗರ ಅಪರಾಧ ವಿಭಾಗವು ಬುಧವಾರ ಬಂಧಿಸಿದೆ.
ಬುಧವಾರ ಬಂಧಿತರಾದ ಪುಣೆಯ ನಿವಾಸಿಗಳಾದ ಆದಿತ್ಯ ಗುಲ್ಂಕರ್ (22) ಮತ್ತು ರಫೀಕ್ ಶೇಖ್ (22) ಅವರನ್ನು ಎಸ್ಪ್ಲೇನೇಡ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನವೆಂಬರ್ 13 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಅವರು ಬಡ ಕುಟುಂಬದಿಂದ ಬಂದವರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ವಿಚಾರಣೆ ವೇಳೆ ಅವರ ಹೆಸರುಗಳು ಬೆಳಕಿಗೆ ಬಂದಿವೆ. ಪುಣೆ ಸಮೀಪದ ಖಡಕ್‌ವಾಸ್ಲಾ ಬಳಿ ಗುಲ್ನಾಕರ್‌ಗೆ ಬಂದೂಕುಗಳನ್ನು ನಿರ್ವಹಿಸುವ ತರಬೇತಿ ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆರಂಭದಲ್ಲಿ, ಹೆಚ್ಚಿನ ಶೂಟರ್‌ಗಳನ್ನು ನೇಮಿಸಿಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ ಮಾಸ್ಟರ್‌ಮೈಂಡ್ ಸಂಖ್ಯೆಯನ್ನು ಮೂರಕ್ಕೆ ಇಳಿಸಲು ನಿರ್ಧರಿಸಿದ್ದರು.
ಗುಲ್ಂಕರ್ ಮತ್ತು ಶೇಖ್ ಪಾತ್ರದ ಬಗ್ಗೆ ಮಾತನಾಡಿದ ಅಧಿಕಾರಿಯೊಬ್ಬರು, ಇಬ್ಬರೂ ಆರೋಪಿಗಳು ಈ ಹಿಂದೆ ಬಂಧಿತರಾದ ಪ್ರವೀಣ್ ಲೋಂಕರ್ ಮತ್ತು ಮೊಹೋಲ್ ಅವರೊಂದಿಗೆ ಸಂಪರ್ಕದಲ್ಲಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಲೊಂಕರ್ ಮತ್ತು ಮೊಹೋಲ್, ಅವರಿಗೆ 9 ಎಂಎಂ ಪಿಸ್ತೂಲ್ ನೀಡಿದ್ದರು. ಅಪರಾಧದಲ್ಲಿ ಬಳಸಲಾಗಿದ್ದ 9 ಎಂಎಂ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ಉಳಿದ ಗನ್ ಪೌಡರ್ ಪತ್ತೆ ಮಾಡಿ ವಶಪಡಿಸಿಕೊಳ್ಳುವ ಪ್ರಯತ್ನ ಮುಂದುವರಿದಿದೆ ಎಂದು ಮಾಹಿತಿ ನೀಡಿದ್ದಾರೆ.
9 ಎಂಎಂ ಪಿಸ್ತೂಲ್ ಅನ್ನು ಮುಂಬೈನಿಂದ ಪುಣೆಗೆ ವಾಪಸ್ ಕಳುಹಿಸಲಾಯಿತು ಮತ್ತು ಲೋಂಕರ್ ಅವರಿಗೆ ಹಸ್ತಾಂತರಿಸಲಾಯಿತು. ಅವರು ಅದನ್ನು ಮೊಹೋಲ್‌ಗೆ ಹಸ್ತಾಂತರಿಸಿದ್ದರು ಮತ್ತು ಅಂತಿಮವಾಗಿ ಅದನ್ನು ಗುಲ್ಂಕರ್ ಮತ್ತು ಶೇಖ್‌ಗೆ ಹಸ್ತಾಂತರಿಸಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯ ವಿವರ
ಅಕ್ಟೋಬರ್ 12 ರಂದು ಬಾಂದ್ರಾ ಪೂರ್ವದಲ್ಲಿರುವ ಕಚೇರಿಯ ಹೊರಗೆ ಮೂವರು ಬಂದೂಕುಧಾರಿಗಳು ಬಾಬಾ ಸಿದ್ದಿಕ್ ಅವರನ್ನು ಗುಂಡಿಕ್ಕಿ ಕೊಂದಿದ್ದರು. ಗುಂಡಿನ ದಾಳಿಯ ನಂತರ ಇಬ್ಬರು ಶೂಟರ್‌ಗಳನ್ನು ಪೊಲೀಸರು ಹಿಡಿದಿದ್ದರು. ಅವರಲ್ಲಿ ಒಬ್ಬರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಅವರನ್ನು ಇನ್ನೂ ಬಂಧಿಸಲು ಸಾಧ್ಯವಾಗಿಲ್ಲ. ಆರೋಪಿಗಳಿಂದ ಇದುವರೆಗೆ ತನಿಖಾಧಿಕಾರಿಗಳು ಐದು ಶಸ್ತ್ರಾಸ್ತ್ರಗಳು ಮತ್ತು 64 ಬುಲೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಕೊಲೆಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ಬಂಧಿತ 18 ಆರೋಪಿಗಳಲ್ಲಿ 14 ಮಂದಿ ಜೈಲಿನಲ್ಲಿದ್ದರೆ, ನಾಲ್ವರು ಪೊಲೀಸರ ವಶದಲ್ಲಿದ್ದಾರೆ. ಆರೋಪಿಗಳು ಪಂಜಾಬ್, ಯುಪಿ ಮತ್ತು ಪುಣೆಯಿಂದ ಸಂಚು ರೂಪಿಸಿದ್ದರು.
ಈ ಸುದ್ದಿಯನ್ನು ಓದಿ: Baba Siddique: ಬಾಬಾ ಸಿದ್ದಿಕಿ ಹತ್ಯೆಗೆ ಪಾಕಿಸ್ತಾನದಿಂದ ಡ್ರೋನ್ ಮೂಲಕ ಗನ್ ರವಾನೆ? ಬೆಚ್ಚಿ ಬೀಳಿಸುವ ಮಾಹಿತಿ ಬಹಿರಂಗ