ಮುಂಬೈ: ದೇಶವನ್ನೇ ಬೆಚ್ಚಿ ಬೀಳಿಸಿದ ಮಹಾರಾಷ್ಟ್ರದ ಮಾಜಿ ಸಚಿವ, ಎನ್ಸಿಪಿ ನಾಯಕ ಬಾಬಾ ಸಿದ್ದಿಕಿ (Baba Siddique) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ (ಅ. 25) ಮಹತ್ವದ ಸಂಗತಿಯೊಂದು ಹೊರ ಬಿದ್ದಿದೆ. ಹತ್ಯೆಗೆ ಮೂರಲ್ಲ ನಾಲ್ಕು ಗನ್ಗಳನ್ನು ಬಳಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಗನ್ಗಳನ್ನು ಪಾಕಿಸ್ತಾನದಿಂದ ಡ್ರೋನ್ ಮೂಲಕ ರವಾನಿಸಲಾಗಿದೆ ಎನ್ನುವ ಸಂಶಯವನ್ನು ಮುಂಬೈ ಪೊಲೀಸರು ವ್ಯಕ್ತಪಡಿಸಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಹೆಚ್ಚಿನ ಮಾಹಿತಿ ಕಲೆ ಹಾಕಲು ಗನ್ನ ಫೋಟೊವನ್ನು ರಾಜಸ್ಥಾನ ಪೊಲೀಸರಿಗೆ ರವಾನಿಸಲಾಗಿದೆ.
66 ವರ್ಷದ ಎನ್ಸಿಪಿ ನಾಯಕ ಬಾಬಾ ಸಿದ್ದಿಕಿ ಅವರ ಮೇಲೆ ಅಕ್ಟೋಬರ್ 12ರಂದು ಮೂವರು ಗುಂಡಿನ ದಾಳಿ ನಡೆಸಿದ್ದರು. ಮುಂಬೈಯ ಬಾಂದ್ರಾ ಪ್ರದೇಶದ ಖೇರ್ ನಗರದಲ್ಲಿನ ಬಾಬಾ ಸಿದ್ದಿಕಿ ಅವರ ಪುತ್ರ, ಶಾಸಕ ಜೀಶಾನ್ ಸಿದ್ದಿಕಿ ಕಚೇರಿಯ ಹೊರಗೆ ಈ ದಾಳಿ ನಡೆದಿತ್ತು. ಸದ್ಯ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈ ಹತ್ಯೆಯ ಹೊಣೆ ಹೊತ್ತುಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 14 ಮಂದಿಯನ್ನು ಬಂಧಿಸಲಾಗಿದೆ. ಮೂವರು ತಪ್ಪಿಸಿಕೊಂಡಿದ್ದಾರೆ. ಅವರ ಪತ್ತೆಗೆ ಬಲೆ ಬೀಸಲಾಗಿದೆ.
#WATCH | Maharashtra: Son of late NCP leader Baba Siddique, former Mumbai Youth Congress president Zeeshan Siddiqui joins the NCP in Mumbai.
— ANI (@ANI) October 25, 2024
NCP announces Zeeshan Siddiqui as party candidate from Bandra East Constituency for #MaharashtraElection2024 pic.twitter.com/EgjoHht4Lx
ಪೊಲೀಸರ ಪ್ರಕಾರ, ಹರಿಯಾಣ ನಿವಾಸಿ ಗುರ್ಮೈಲ್ ಬಲ್ಜಿತ್ ಸಿಂಗ್ ಮತ್ತು ಉತ್ತರ ಪ್ರದೇಶ ಮೂಲದ ಧರ್ಮರಾಜ್ ಕಶ್ಯಪ್ ಮತ್ತು ಶಿವಕುಮಾರ್ ಗೌತಮ್ ಬಾಬಾ ಸಿದ್ದಿಕಿ ಮೇಲೆ ಗುಂಡು ಹಾರಿಸಿದರೆ, ಪುಣೆ ಮೂಲದ ಪ್ರವೀಣ್ ಲೋಂಕರ್ ಸಹೋದರ, ಆರೋಪಿ ಶುಭಂ ಜೈಲಿನಲ್ಲಿರುವ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ನೊಂದಿಗೆ ಸಂಪರ್ಕ ಹೊಂದಿದ್ದಾನೆ. ಶುಭಂ ಮತ್ತು ಇತರ ಆರೋಪಿಗಳು ದಾಳಿ ನಡೆಸಲು ಸಂಚು ರೂಪಿಸಿದ್ದರು ಮತ್ತು ಶೂಟರ್ಗಳಿಗೆ ಬಂದೂಕುಗಳನ್ನು ಸರಬರಾಜು ಮಾಡಿದ್ದರು ಎನ್ನಲಾಗಿದೆ.
ಈ ಮೂವರು ಶೂಟರ್ಗಳು ಬಾಬಾ ಸಿದ್ದಿಕ್ ಅವರ ರಕ್ಷಣೆಗಾಗಿ ನಿಯೋಜಿಸಿದ್ದ ಪೊಲೀಸರ ಮೇಲೆ ಖಾರದ ಪುಡಿ ಎರಚಿ ಗುಂಡಿನ ದಾಳಿ ನಡೆಸಿದ್ದರು. ಪುಣೆ ಮೂಲದ ಗುಜರಿ ವ್ಯಾಪಾರಿ ಹರೀಶ್ ಕುಮಾರ್ ನಿಶಾದ್ ಇವರಿಗೆಲ್ಲ ಆರ್ಥಿಕ ಸಹಾಯ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮುಖ್ಯ ಶೂಟರ್ಗಳಾದ ಶಿವಕುಮಾರ್ ಗೌತಮ್, ಪ್ರಮುಖ ಆರೋಪಿ ಶುಭಂ ಲೋಕರ್ ಹಾಗೂ ಮೊಹಮ್ಮದ್ ಝೀಶನ್ ಅಖ್ತರ್ ಸದ್ಯ ತಲೆ ಮರೆಸಿಕೊಂಡಿದ್ದಾರೆ. ಮೊಹಮ್ಮದ್ ಝೀಶನ್ ಅಖ್ತರ್ ಎಲ್ಲ ಆರೋಪಿಗಳೊಂದಿಗೆ ಸಂಪರ್ಕದಲ್ಲಿದ್ದು, ಬಾಬಾ ಸಿದ್ದಿಕಿ ಹತ್ಯೆಯ ಬಳಿಕ ಅವರಿಗೆಲ್ಲ ಕೈ ತುಂಬ ಹಣ ಮತ್ತು ವಿದೇಶ ಪ್ರವಾಸದ ಭರವಸೆ ನೀಡಿದ್ದ ಎಂದು ತನಿಖಾಧಿಕಾರಿಗಳು ವಿವರಿಸಿದ್ದಾಗಿ ಎನ್ಡಿಟಿವಿ ವರದಿ ಮಾಡಿದೆ. ಬಾಬಾ ಸಿದ್ದಿಕಿ ಕೊಲೆ ತನಿಖೆಗೆ ಸಂಬಂಧಿಸಿದಂತೆ, ಮುಂಬೈ ಪೊಲೀಸರು ಮಹಾರಾಷ್ಟ್ರದಾದ್ಯಂತ 15 ತಂಡಗಳನ್ನು ನಿಯೋಜಿಸಿದ್ದಾರೆ.
ಮತ್ತೊಂದು ಮಹತ್ವದ ಕಾರ್ಯಾಚರಣೆಯಲ್ಲಿ ದಿಲ್ಲಿ ಪೊಲೀಸ್ನ ಸ್ಪೆಷಲ್ ಸೆಲ್ ಶುಕ್ರವಾರ ರಾಜಸ್ಥಾನದಲ್ಲಿ ದಾಳಿ ನಡೆಸಲು ಯೋಜನೆ ರೂಪಿಸಿದ್ದ 7 ಮಂದಿ ಲಾರೆನ್ಸ್ ಬಿಷ್ಣೋಯ್ ಗುಂಪಿನ ಸದಸ್ಯರನ್ನು ಬಂಧಿಸಿದ್ದಾರೆ. ಆ ಮೂಲಕ ಬಹು ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Baba Siddique: ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದಲ್ಲಿ ಗುಜರಿ ವ್ಯಾಪಾರಿ ಪೊಲೀಸ್ ಬಲೆಗೆ; ಬಂಧಿತರ ಸಂಖ್ಯೆ 10ಕ್ಕೆ ಏರಿಕೆ