Friday, 22nd November 2024

Baba Siddique: ಬಾಬಾ ಸಿದ್ದಿಕ್ಕಿ ಹತ್ಯೆ ಪ್ರಕರಣ; ಶೂಟರ್‌ ಸಹಿತ ಮೂವರ ಬಂಧನ

Baba Siddique

ಲಖನೌ: ದೇಶವನ್ನೇ ಬೆಚ್ಚಿ ಬೀಳಿಸಿದ ಮಹಾರಾಷ್ಟ್ರದ ಮಾಜಿ ಸಚಿವ, ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ (Baba Siddique) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದ್ದು, ಉತ್ತರ ಪ್ರದೇಶದಲ್ಲಿ ಓರ್ವ ಶೂಟರ್‌ ಮತ್ತು ಇಬ್ಬರು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. ಮುಂಬೈ ಪೊಲೀಸ್ ಅಪರಾಧ ವಿಭಾಗ ಮತ್ತು ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ (Special Task Force) ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈ ಮೂವರನ್ನು ವಶಕ್ಕೆ ಪಡೆಯಲಾಗಿದ್ದು, ಅವರನ್ನು ಮುಂಬೈಗೆ ಕರೆ ತರಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ʼʼಪ್ರಕರಣಕ್ಕೆ ಸಂಬಂಧಿಸಿ ಶೂಟರ್‌ ಶಿವ ಕುಮಾರ್‌ ಮತ್ತು ಇಬ್ಬರು ಶಂಕಿತರನ್ನು ಉತ್ತರ ಪ್ರದೇಶದಿಂದ ವಶಕ್ಕೆ ಪಡೆಯಲಾಗಿದೆʼʼ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಿವ ಕುಮಾರ್‌ ನೇಪಾಳಕ್ಕೆ ಪರಾರಿಯಾಗಿಉವ ಸಿದ್ಧತೆಯಲ್ಲಿ ತೊಡಗಿದ್ದಾಗ ಬಲೆಗೆ ಬಿದ್ದಿದ್ದಾನೆ. ನ. 8ರಂದು ಮುಂಬೈ ಪೊಲೀಸರು ಗೌರವ್ ವಿಲಾಸ್ ಅಪುಣೆ ಎಂಬ ಶೂಟರ್‌ನನ್ನು ಬಂಧಿಸಿದ್ದರು. ಎಎನ್ಐ ವರದಿಯ ಪ್ರಕಾರ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ತಯಾರಿಸಿದ ಪ್ಲಾನ್ ಬಿಯ ಭಾಗವಾಗಿದ್ದ ಈ ಗೌರವ್ ವಿಲಾಸ್ ಅಪುಣೆ. ಆತ ಶೂಟಿಂಗ್ ತರಬೇತಿಗಾಗಿ ಜಾರ್ಖಂಡ್‌ಗೂ ತೆರಳಿದ್ದ. ಪ್ಲಾನ್ ಎ ವಿಫಲವಾದರೆ ಬ್ಯಾಕಪ್‌ಗಾಗಿ ಪ್ಲಾನ್ ಬಿ ಸಿದ್ಧಪಡಿಸಲಾಗಿತ್ತು ಎಂದು ಅಪುಣೆ ತಿಳಿಸಿದ್ದ. ಈ ಹಿಂದೆ ಬಂಧಿಸಲ್ಪಟ್ಟ ಆರೋಪಿಗಳಲ್ಲಿ ಒಬ್ಬನಾದ ರೂಪೇಶ್ ಮೊಹೋಲ್ ಕೂಡ ತರಬೇತಿಗಾಗಿ ಅಪುಣೆಯೊಂದಿಗೆ ಜಾರ್ಖಂಡ್‌ಗೆ ತೆರಳಿದ್ದ.

ಹೆಚ್ಚಿನ ವಿಚಾರಣೆಯಲ್ಲಿ ಕೊಲೆಯ ಮಾಸ್ಟರ್ ಮೈಂಡ್ ಶುಭಂ ಲೋಂಕರ್ ಜು. 28ರಂದು ಮೊಹೋಲ್ ಮತ್ತು ಅಪುಣೆ ಇಬ್ಬರನ್ನೂ ಅಗತ್ಯ ಶಸ್ತ್ರಾಸ್ತ್ರಗಳೊಂದಿಗೆ ಜಾರ್ಖಂಡ್‌ಗೆ ತರಬೇತಿಗಾಗಿ ಕಳುಹಿಸಿದ್ದ ಎನ್ನುವುದು ಬಹಿರಂಗಗೊಂಡಿದೆ. ಜೈಲಿನಲ್ಲಿರುವ ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಬಾಬಾ ಸಿದ್ದಿಕಿ ಹತ್ಯೆಯ ಹಿಂದಿನ ರೂವಾರಿ ಎಂದು ಶಂಕಿಸಲಾಗಿದೆ.

ಪ್ರಕರಣದ ಹಿನ್ನೆಲೆ

66 ವರ್ಷದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಅವರ ಮೇಲೆ ಅ. 12ರಂದು ಮೂವರು ಗುಂಡಿನ ದಾಳಿ ನಡೆಸಿದ್ದರು. ಮುಂಬೈಯ ಬಾಂದ್ರಾ ಪ್ರದೇಶದ ಖೇರ್ ನಗರದಲ್ಲಿನ ಬಾಬಾ ಸಿದ್ದಿಕಿ ಅವರ ಪುತ್ರ, ಶಾಸಕ ಜೀಶಾನ್ ಸಿದ್ದಿಕಿ ಕಚೇರಿಯ ಹೊರಗೆ ಈ ದಾಳಿ ನಡೆದಿತ್ತು. ಆಘಾತಕಾರಿ ಸಂಗತಿಯೆಂದರೆ ದಸರಾ ಆಚರಣೆಯ ವೇಳೆ, ಪೊಲೀಸರು ಹೆಚ್ಚಿನ ಎಚ್ಚರಿಕೆ ವಹಿಸಿದ್ದ ದಿನದಂದೇ ಜನನಿಬಿಡ ರಸ್ತೆಯಲ್ಲಿ ಈ ದಾಳಿ ನಡೆಸಲಾಗಿತ್ತು. ಗಾಯಗೊಂಡ ಸಿದ್ದಿಕ್ಕಿ ಅವರನ್ನು ತಕ್ಷಣ ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿ ಅವರು ಮೃತಪಟ್ಟಿದ್ದರು.

ಸಲ್ಮಾನ್ ಮೇಲಿನ ದ್ವೇಷಕ್ಕೆ ಕೊಲೆ?

ಬಾಬಾ ಸಿದ್ದಿಕಿ ಅವರ ಹತ್ಯೆಯಲ್ಲಿ ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಮತ್ತು ನಟ ಸಲ್ಮಾನ್ ಖಾನ್ ನಡುವಿನ ದ್ವೇಷ ಸೇರಿದಂತೆ ಎಲ್ಲ ಸಂಭಾವ್ಯ ಕೋನಗಳ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಲಾರೆನ್ಸ್ ಬಿಷ್ಣೋಯ್‌ ಸಲ್ಮಾನ್ ಖಾನ್‌ಗೆ ಪದೇ ಪದೆ ಬೆದರಿಕೆ ಒಡ್ಡುತ್ತಿದ್ದು ಕೊಲೆ ಮಾಡುವುದಾಗಿ ಹೇಳಿದ್ದಾನೆ. ಸಲ್ಮಾನ್ ಮತ್ತು ಬಾಬಾ ಸಿದ್ದಿಕಿ ಆಪ್ತರಾಗಿರುವ ಕಾರಣ ಅದೇ ಕೋಪದಲ್ಲಿ ಹತ್ಯೆ ಮಾಡಿದ್ದಾನೆ ಎಂಬುವ ವಾದವಿದೆ.

ಈ ಸುದ್ದಿಯನ್ನೂ ಓದಿ: Zeeshan Siddique: ಯುದ್ಧ ಮುಗಿದಿಲ್ಲ; ಬಿಷ್ಣೋಯ್‌ ಗ್ಯಾಂಗ್‌ಗೆ ಸವಾಲು ಒಡ್ಡಿದ ಬಾಬಾ ಸಿದ್ದಿಕಿ ಪುತ್ರ