Sunday, 15th December 2024

ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಾಬುಲ್ ಸುಪ್ರಿಯೋ

ನವದೆಹಲಿ: ಬಿಜೆಪಿ ತೊರೆದು ಟಿಎಂಸಿ ಸೇರಿರುವ ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ, ಮಂಗಳವಾರ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ದೆಹಲಿಯ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದ ಬಾಬುಲ್ ಸುಪ್ರಿಯೋ, ಬಿಜೆಪಿ ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಸುಪ್ರಿಯೋ ಸಲ್ಲಿಸಿರುವ ರಾಜೀನಾಮೆಯನ್ನು ಸ್ಪೀಕರ್ ಓಂ ಬಿರ್ಲಾ ಅಂಗೀಕರಿಸಿದರು.

ಬಾಬುಲ್ ಸುಪ್ರಿಯೋ ಮಾತನಾಡಿ, ಬಿಜೆಪಿಯೊಂದಿಗೆ ಅಧಿಕೃತವಾಗಿ ಸಂಬಂಧ ಕಡಿದುಕೊಳ್ಳುತ್ತಿರುವುದು ಮನಸ್ಸನ್ನು ಭಾರಗೊಳಿಸಿದೆ. ನನ್ನ ರಾಜಕೀಯ ಜೀವನ ಆರಂಭವಾಗಿದ್ದು ಬಿಜೆಪಿ ಪಕ್ಷದಿಂದ. ಈಗ ಆ ಪಕ್ಷವನ್ನು ತೊರೆಯುತ್ತಿರುವುದು ನನ್ನ ಪಾಲಿಗೆ ಅಷ್ಟು ಸುಲಭವಲ್ಲ ಎಂದು ಸುಪ್ರಿಯೋ ಹೇಳಿದರು.

ನನ್ನ ಮೇಲೆ ನಂಬಿಕೆಯಿಟ್ಟು ಪಕ್ಷ ಮತ್ತು ಸರ್ಕಾರದಲ್ಲಿ ಜವಾಬ್ದಾರಿ ನೀಡಿದ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ನುಡಿದರು.