ಲಕ್ನೋ: ಉತ್ತರ ಪ್ರದೇಶದ ಬಹ್ರೈಚ್ (Bahraich Unrest)ನಲ್ಲಿ ಭಾನುವಾರ (ಅಕ್ಟೋಬರ್ 13) ನವರಾತ್ರಿ ಮೆರವಣಿಗೆ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಪೊಲೀಸ್ ಎನ್‌ಕೌಂಟರ್(Police Encounter)ನಲ್ಲಿ ಹತನಾಗಿದ್ದಾನೆ. ಮೃತನನ್ನು ಶರ್ಫರಾಜ್(Sarfaraz) ಎಂದು ಗುರುತಿಸಲಾಗಿದ್ದು, ಈತ ನೇಪಾಳಕ್ಕೆ ಪರಾರಿಯಾಗಲು ಯತ್ನಿಸಿದ್ದ ಎನ್ನಲಾಗಿದೆ.
ನನ್ಪಾರಾ ಪೊಲೀಸ್ ಠಾಣೆಯ ಬೈಪಾಸ್‌ನಲ್ಲಿ ಎನ್‌ಕೌಂಟರ್ ನಡೆದಿದ್ದು, ಬಹ್ರೈಚ್‌ನ ಮಹಾರಾಜ್‌ಗಂಜ್‌ನಲ್ಲಿ ನಡೆದ ಕೊಲೆ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳಾದ ತಾಲೀಬ್ ಮತ್ತು ಶರ್ಫರಾಜ್ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಪೊಲೀಸರು ಗುಂಡು ಹಾರಿಸಿದ್ದಾರೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಶರ್ಫರಾಜ್ ಸ್ಥಳದಲ್ಲೇ ಮೃತಪಟ್ಟಿದ್ದು,ತಾಲೀಬ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಸರ್ಫರಾಜ್ ಪ್ರಮುಖ ಆರೋಪಿ ಅಬ್ದುಲ್ ಹಮೀದ್ ಅವರ ಪುತ್ರನಾಗಿದ್ದಾನೆ ಎನ್ನಲಾಗಿದೆ.
ಇದಕ್ಕೂ ಮುನ್ನ ಶರ್ಫರಾಜ್ ಪತ್ನಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಪತ್ರ ಬರೆದು ನನ್ನ ಪತಿ ಮತ್ತು ನನ್ನ ಸೋದರಮಾವನನ್ನು ಈ ಹಿಂದೆಯೇ ಕರೆದುಕೊಂಡು ಹೋಗಲಾಗಿದ್ದು, ಅವರ ಬಗ್ಗೆ ಯಾವುದೇ ಪೊಲೀಸ್ ಠಾಣೆಯಿಂದ ನಮಗೆ ಯಾವುದೇ ಸುದ್ದಿ ಸಿಗುತ್ತಿಲ್ಲ. ಆತನನ್ನು ಎನ್‌ಕೌಂಟರ್ ಮಾಡಿ ಕೊಲ್ಲಬಹುದೆಂಬ ಭಯ ನಮಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.
ಏನಿದು ಘಟನೆ?
ದುರ್ಗಾ ದೇವಿಯ ವಿಗ್ರಹದ ವಿಸರ್ಜನಾ ಮೆರವಣಿಗೆ ಮನ್ಸೂರ್ ಗ್ರಾಮದ ಮಹರಾಜ್ಗಂಜ್ ಬಜಾರ್ ಮೂಲಕ ಹಾದುಹೋದಾಗ ಘರ್ಷಣೆ ನಡೆದಿದೆ. ರೆಹುವಾ ಮನ್ಸೂರ್ ಗ್ರಾಮದ ನಿವಾಸಿ ರಾಮ್ ಗೋಪಾಲ್ ಮಿಶ್ರಾ ಗುಂಪಿನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಆತನ ಮೇಲೆ ಗುಂಡು ಹಾರಿಸಲಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಹತ್ಯೆಯ ನಂತರ ಈ ಪ್ರದೇಶದಲ್ಲಿ ಕೋಮು ಉದ್ವಿಗ್ನತೆ ಉಲ್ಬಣಗೊಂಡಿತು. ಬಳಿಕ ಫಖರ್ಪುರ ಪಟ್ಟಣ ಮತ್ತು ಇತರ ಸ್ಥಳಗಳಲ್ಲಿನ ಮೆರವಣಿಗೆಗಳನ್ನು ರದ್ದುಗೊಳಿಸಲಾಯಿತು. ಆದಾಗ್ಯೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಿಗ್ರಹ ವಿಸರ್ಜನೆಯನ್ನು ಮುಂದುವರಿಸಬೇಕು ಮತ್ತು ಅದು ಸರಿಯಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಧಾರ್ಮಿಕ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಬೇಕು ಎಂದು ಆಡಳಿತಕ್ಕೆ ನಿರ್ದೇಶನ ನೀಡಿದರು.
ವಿಗ್ರಹವನ್ನು ವಿಸರ್ಜಿಸುವ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಲು ನಿರ್ದೇಶನ ನೀಡಲಾಯಿತು. ವಿವಿಧ ಗ್ರಾಮಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಯಿತು. ಬಹ್ರೈಚ್‌ನಲ್ಲಿ ಉಂಟಾದ ಕೋಮು ಗಲಭೆ ಹಿನ್ನೆಲೆಯಲ್ಲಿ ಹಾರ್ಡಿ ಪೊಲೀಸ್ ಠಾಣೆಯ ಮುಖ್ಯಸ್ಥ ಎಸ್.ಕೆ.ವರ್ಮಾ ಮತ್ತು ಮಾಹ್ಸಿ ಹೊರಠಾಣೆಯ ಉಸ್ತುವಾರಿ ಶಿವ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ. ನಿರ್ಲಕ್ಷ್ಯ ತೋರಿದ ಸಿಬ್ಬಂದಿ ವಿರುದ್ಧ ಪೊಲೀಸ್ ವರಿಷ್ಠಾಧಿಕಾರಿ ಕ್ರಮ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿಯನ್ನೂ ಓದಿ: Bahraich Unrest: ಬಹ್ರೈಚ್ ಉದ್ವಿಗ್ನ-ಉಗ್ರ ಸ್ವರೂಪ ಪಡೆದುಕೊಂಡ ಗಲಭೆ; ಆಸ್ಪತ್ರೆ, ವಾಹನಗಳಿಗೆ ಬೆಂಕಿ