ದುರ್ಗಾಪೂಜೆಯ ಮೆರವಣಿಗೆ (Durga Puja procession) ವೇಳೆ ನಡೆದ ಹಿಂದೂ ವ್ಯಕ್ತಿಯೊಬ್ಬನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಹ್ರೈಚ್‌ನಲ್ಲಿ (Bahraich Violence) ಉಂಟಾದ ಉದ್ವಿಗ್ನತೆಯಿಂದ ಹಲವಾರು ಅಂಗಡಿಗಳು ಧ್ವಂಸಗೊಂಡಿವೆ. ಈವರೆಗೆ 87 ಮಂದಿಯನ್ನು ಬಂಧಿಸಲಾಗಿದೆ. ಈ ಗಲಭೆ ಉತ್ತರ ಪ್ರದೇಶದಲ್ಲಿ ಕೋಲಾಹಲ ಸೃಷ್ಟಿಸಿದೆ. ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ. ಯುವಕನ ಕೊಲೆಯ ಹಿನ್ನೆಲೆಯಲ್ಲಿ ಹಿಂದೂಗಳು ಆಕ್ರೋಶಗೊಂಡಿದ್ದಾರೆ.
ಬಹ್ರೈಚ್‌ನಲ್ಲಿ ಅಕ್ಟೋಬರ್ 12ರಂದು ಶನಿವಾರ ನಡೆದ ದುರ್ಗಾಪೂಜೆಯ ಮೆರವಣಿಗೆ ವೇಳೆ ಗಲಭೆ ಸ್ಫೋಟಗೊಂಡು 22 ವರ್ಷದ ರಾಮ್ ಗೋಪಾಲ್ ಮಿಶ್ರಾ ಎಂಬಾತನನ್ನು ಕೊಲೆ ಮಾಡಲಾಗಿತ್ತು. ಇದು ಕೋಮು ಗಲಭೆಗೆ ಕಾರಣವಾಗಿದ್ದು, ಹಲವರು ಅಂಗಡಿಗಳಿಗೆ ಬೆಂಕಿ ಹಚ್ಚಿ ಧ್ವಂಸಗೊಳಿಸಲಾಗಿತ್ತು. ಬಹ್ರೈಚ್ ಜಿಲ್ಲೆಯ ಮಹಾರಾಜ್‌ಗಂಜ್ ಪ್ರದೇಶದಲ್ಲಿ ದುರ್ಗಾ ಪೂಜೆಯ ಸಂಗೀತಕ್ಕೆ ನಿರ್ದಿಷ್ಟ ಕೋಮಿನ ಜನ ಆಕ್ಷೇಪಿಸಿದ್ದರು. ಇದು ಮುಂದೆ ಕೋಮು ಗಲಭೆಗೆ ಕಾರಣವಾಗಿತ್ತು. ಆ ಬಳಿಕ ಮನೆಯೊಂದರ ಚಾವಣಿಯಲ್ಲಿದ್ದ ಹಸಿರು ಧ್ವಜವನ್ನು ತೆಗೆದು ಕೇಸರಿ ಧ್ವಜ ಹಾರಿಸಿದ್ದು ಮತ್ತಷ್ಟು ಉದ್ವಿಗ್ನತೆಯನ್ನು ಹೆಚ್ಚಿಸಿತ್ತು. ಬಳಿಕ ಉಂಟಾದ ಗುಂಡಿನ ದಾಳಿಯಲ್ಲಿ ರಾಮ್ ಗೋಪಾಲ್ ಮಿಶ್ರಾ ಗಂಭೀರ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಕೊನೆಯುಸಿರೆಳೆದಿದ್ದರು. ಅನಂತರ ಗಲಾಟೆ ಮತ್ತಷ್ಟು ಹೆಚ್ಚಾಗಿದ್ದು, ಕಲ್ಲು ತೂರಾಟ, ಅಂಗಡಿಗಳಿಗೆ ಬೆಂಕಿ ಹಚ್ಚಲಾಯಿತು.
ಹಲವಾರು ಅಂಗಡಿ, ಮನೆ ಮತ್ತು ವಾಹನಗಳು ಧ್ವಂಸಗೊಂಡಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಕೆಲವು ಅರೆಸೇನಾ ಪಡೆಗಳ ಘಟಕಗಳನ್ನು ಕರೆಸಬೇಕಾಯಿತು. ಅಕ್ಟೋಬರ್ 14ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಾನೂನು ಮತ್ತು ಸುವ್ಯವಸ್ಥೆಗೆ ಅಡ್ಡಿಪಡಿಸುವ ಅಥವಾ ವದಂತಿಗಳನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರು. ಲಕ್ನೋದಲ್ಲಿನ ತಮ್ಮ ನಿವಾಸದಲ್ಲಿ ಮಿಶ್ರಾ ಅವರ ಕುಟುಂಬವನ್ನು ಭೇಟಿಯಾದ ಯೋಗಿ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.
ಆರೋಪಿಗಳ ಎನ್‌ಕೌಂಟರ್
ಮಿಶ್ರಾ ಕೊಲೆಗೆ ಕಾರಣರಾದ ಐವರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಈ ಐವರು ನೇಪಾಳಕ್ಕೆ ಪಲಾಯನ ಮಾಡುವ ಪ್ರಯತ್ನದಲ್ಲಿದ್ದರು ಎನ್ನಲಾಗಿದೆ. ಬಂಧಿತರನ್ನು ಮೊಹಮ್ಮದ್ ಫಹೀನ್, ಮೊಹಮ್ಮದ್ ಸರ್ಫರಾಜ್, ಅಬ್ದುಲ್ ಹಮೀದ್, ಮೊಹಮ್ಮದ್ ತಲೀಮ್ ಅಲಿಯಾಸ್ ಸಬ್ಲೂ ಮತ್ತು ಮೊಹಮ್ಮದ್ ಅಫ್ಜಲ್ ಎಂದು ಗುರುತಿಸಲಾಗಿದೆ. ಇವರಲ್ಲಿ ಮೊಹಮ್ಮದ್ ತಾಲೀಮ್ ಮತ್ತು ಮೊಹಮ್ಮದ್ ಸರ್ಫರಾಜ್ ಎಂಬಿಬ್ಬರ ಕಾಲಿಗೆ ಪೊಲೀಸರು ಗುಂಡಿಕ್ಕಿದ್ದಾರೆ. ಗಲಭೆಗೆ ಸಂಬಂಧಿಸಿ ಬಹ್ರೈಚ್‌ನಲ್ಲಿ ಈವರೆಗೆ 87 ಮಂದಿಯನ್ನು ಬಂಧಿಸಿಲಾಗಿದೆ. 11 ಎಫ್‌ಐಆರ್‌ಗಳು ಮತ್ತು ಸುಮಾರು 1,000 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಅಧಿಕಾರಿಗಳ ಅಮಾನತು
ಹಿಂಸಾಚಾರದ ಅನಂತರ ವೃತ್ತ ಅಧಿಕಾರಿ ರೂಪೇಂದ್ರ ಗೌರ್, ತಹಸೀಲ್ದಾರ್ ರವಿಕಾಂತ್ ದ್ವಿವೇದಿ ಮತ್ತು ಜಿಲ್ಲಾ ಮಾಹಿತಿ ಅಧಿಕಾರಿ ಗುಲಾಂ ವಾರಿಸ್ ಸಿದ್ದಿಕಿ ಅವರ ವಜಾಗೊಳಿಸಲಾಗಿದೆ. ಠಾಣಾಧಿಕಾರಿ ಹಾಗೂ ಪೊಲೀಸ್ ಹೊರಠಾಣೆ ಉಸ್ತುವಾರಿ ಅಧಿಕಾರಿಯನ್ನೂ ಅಮಾನತುಗೊಳಿಸಲಾಗಿದೆ.
ಆರೋಪಿಗಳ ಕಟ್ಟಡ ಉರುಳಿಸಲು ಸಿದ್ಧತೆ
ಮಹರಾಜ್‌ಗಂಜ್ ಪ್ರದೇಶದಲ್ಲಿ ಪಿಡಬ್ಲ್ಯೂಡಿ ಇಲಾಖೆ ತಪಾಸಣೆ ಕೈಗೊಂಡಿದ್ದು, ಮಿಶ್ರಾ ಹತ್ಯೆ ಆರೋಪಿ ಹಮೀದ್ ಸೇರಿದಂತೆ ಹಲವರ ಮನೆಗಳನ್ನು ಅಕ್ರಮ ಎಂದು ಗುರುತಿಸಿದೆ. ಮೂರು ದಿನಗಳ ಒಳಗೆ ಮನೆ ಖಾಲಿ ಮಾಡುವಂತೆ ಈ ಆರೋಪಿಗಳ ಕುಟುಂಬಗಳಿಗೆ ನೊಟೀಸ್ ನೀಡಲಾಗಿದೆ. ಆದಷ್ಟು ಬೇಗ ಇವುಗಳನ್ನು ಕೆಡವಲಾಗುವುದು ಎಂದು ಉತ್ತರ ಪ್ರದೇಶದ ಅಧಿಕಾರಿಗಳು ತಿಳಿಸಿದ್ದಾರೆ. ಈ ಕ್ರಮಕ್ಕೆ ತಗಲುವ ವೆಚ್ಚವನ್ನು ಆರೋಪಿಗಳಿಂದಲೇ ವಸೂಲಿ ಮಾಡುವುದಾಗಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೋನಿಕಾ ರಾಣಿ ತಿಳಿಸಿದ್ದಾರೆ.
ಲೋಕೋಪಯೋಗಿ ಇಲಾಖೆಯು ಇನ್ನೂ 23 ಮಂದಿಗೆ ನೊಟೀಸ್ ನೀಡಿದ್ದು, ಇದರಿಂದ ಬಹ್ರೈಚ್‌ನಲ್ಲಿನ ಹಲವು ಅಂಗಡಿಯವರು ಸ್ಥಳ ಖಾಲಿ ಮಾಡಿದ್ದಾರೆ. ಅವರ ಸರಕುಗಳನ್ನು ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಇದರಲ್ಲಿ 20 ಮುಸ್ಲಿಮರಿಗೆ ಸೇರಿದ್ದ ಅಂಗಡಿಗಳಾಗಿತ್ತು ಎಂದು ಮಹ್ಸಿಯ ಬಿಜೆಪಿ ಶಾಸಕ ಸುರೇಶ್ವರ್ ಸಿಂಗ್ ಹೇಳಿದ್ದಾರೆ. ಇಲ್ಲಿ ಸುಮಾರು 50 ಅಂಗಡಿಗಳಿವೆ. ಒಂದೆರಡು ಹೊರತುಪಡಿಸಿ ಹಲವು ಅಕ್ರಮ ಅಂಗಡಿಗಳಾಗಿವೆ. ಧರ್ಮ ಯಾವುದೇ ಇರಲಿ, ತಪ್ಪು ಮಾಡಿದವರನ್ನು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.
Vikash Yadav: ಯಾರಿವರು ಅಮೆರಿಕದ ಮೋಸ್ಟ್ ವಾಂಟೆಡ್ ವಿಕಾಸ್ ಯಾದವ್?
ನ್ಯಾಯ ಸಿಗುವ ಭರವಸೆ
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಮಿಶ್ರಾ ಅವರ ಪತ್ನಿ, ಗಂಡನ ಹಂತಕರು ಸತ್ತಾಗ ಮಾತ್ರ ನ್ಯಾಯ ಸಿಗುತ್ತದೆ ಎಂದು ಹೇಳಿದ್ದಾರೆ. ಕುಟುಂಬಕ್ಕೆ ಮನೆ ನಿರ್ಮಿಸಲು ಹಣ, ಸೊಸೆಗೆ ಕೆಲಸ, ಸ್ವಲ್ಪ ನಗದು ಮತ್ತು ಆಯುಷ್ಮಾನ್ ಕಾರ್ಡ್ ನೀಡುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ. ಆದರೆ ನಮ್ಮ ಮಗನ ಹಂತಕರಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ನಾವು ಆಗ್ರಹಿಸುತ್ತೇವೆ ಎಂದು ಬಲಿಪಶುವಿನ ತಂದೆ ಹೇಳಿದ್ದಾರೆ.