Wednesday, 23rd October 2024

Bahraich Violence: ಬಹ್ರೈಚ್‌ ಹಿಂಸಾಚಾರದ ಆರೋಪಿ ಹಮೀದ್‌ನ ಅಕ್ರಮ ಮನೆ ಕೆಡವಲು ನೋಟಿಸ್‌

ಲಕ್ನೋ: ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಹಿಂಸಾಚಾರದ ಮುಖ್ಯ ಆರೋಪಿ ಅಬ್ದುಲ್ ಹಮೀದ್‌ನ, ಅಕ್ರಮವಾಗಿ ನಿರ್ಮಿಸಲಾದ ಮನೆಯನ್ನು ನೆಲಸಮಗೊಳಿಸುವಂತೆ ಲೋಕೋಪಯೋಗಿ ಇಲಾಖೆ (Public Works Department) ಶುಕ್ರವಾರ ನೋಟಿಸ್ ನೀಡಿದೆ (Bahraich Violence).

ಬಹ್ರೈಚ್‌ನಲ್ಲಿ ಭುಗಿಲೆದ್ದ ಕೋಮು ಸಂಘರ್ಷದ ಹಿನ್ನೆಲೆಯಲ್ಲಿ ಹಮೀದ್ ಮತ್ತು ಇತರ ನಾಲ್ವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಆರೋಪಿಗಳ ಪೈಕಿ ಮೊಹಮ್ಮದ್ ತಾಲಿಮ್ ಮತ್ತು ಮೊಹಮ್ಮದ್ ಸರ್ಫರಾಜ್ ಗುರುವಾರ (ಅಕ್ಟೋಬರ್‌ 17) ಪೊಲೀಸರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಗಾಯಗೊಂಡಿದ್ದಾರೆ. ಅಕ್ಟೋಬರ್‌ 13ರಂದು ದುರ್ಗಾ ವಿಗ್ರಹ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ ಭುಗಿಲೆದ್ದ ನಂತರ 22 ವರ್ಷದ ರಾಮ್ ಗೋಪಾಲ್ ಮಿಶ್ರಾ ಎನ್ನುವವರು ಮೃತಪಟ್ಟಿದ್ದರು.

ಬಹ್ರೈಚ್ ಘರ್ಷಣೆಯ ಆರೋಪಿಗಳಾದ ಸರ್ಫರಾಜ್ ಮತ್ತು ಮೊಹಮ್ಮದ್ ತಾಲಿಬ್ ನೇಪಾಳಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಉತ್ತರ ಪ್ರದೇಶ ಪೊಲೀಸರು ಕಾಲಿಗೆ ಗುಂಡು ಹಾರಿಸಿದ್ದರು. ʼʼಬಹ್ರೈಚ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಐವರಲ್ಲಿ ಇಬ್ಬರು ಎನ್‌ಕೌಂಟರ್‌ನಲ್ಲಿ ಗಾಯಗೊಂಡಿದ್ದರೆ, ಉಳಿದ ಮೂವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆʼʼ ಎಂದು ಉತ್ತರ ಪ್ರದೇಶ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.

ಏನಿದು ಘಟನೆ?

ದುರ್ಗಾ ದೇವಿಯ ವಿಗ್ರಹದ ವಿಸರ್ಜನಾ ಮೆರವಣಿಗೆ ಮನ್ಸೂರ್ ಗ್ರಾಮದ ಮಹರಾಜ್ಗಂಜ್ ಬಜಾರ್ ಮೂಲಕ ಹಾದುಹೋದಾಗ ಘರ್ಷಣೆ ನಡೆದಿದೆ. ಧಾರ್ಮಿಕ ಸ್ಥಳವೊಂದರ ಬಗ್ಗೆ ಜೋರಾಗಿ ಸಂಗೀತ ಹಾಕಿದ್ದಕ್ಕೆ ಉಂಟಾದ ಗಲಾಟೆ ಬಳಿಕ ದೊಡ್ಡ ಮಟ್ಟದ ಸಂಘರ್ಷವಾಗಿ ಬದಲಾಗಿತ್ತು. ರೆಹುವಾ ಮನ್ಸೂರ್ ಗ್ರಾಮದ ನಿವಾಸಿ ರಾಮ್ ಗೋಪಾಲ್ ಮಿಶ್ರಾ ಗುಂಪಿನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಅವರ ಮೇಲೆ ಗುಂಡು ಹಾರಿಸಲಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ರಾಮ್ ಗೋಪಾಲ್ ಮಿಶ್ರಾ ಅವರ ಸಾವಿನ ಸುದ್ದಿ ಸ್ಥಳೀಯರಲ್ಲಿ ಆಕ್ರೋಶವನ್ನು ಹುಟ್ಟು ಹಾಕಿತ್ತು. ಉದ್ರಿಕ್ತರ ಗುಂಪು ಹಾರಾಜ್ಗಂಜ್ ಮಾರುಕಟ್ಟೆಯಲ್ಲಿ ವಾಹನಗಳನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿತ್ತು.

ನೇಪಾಳಕ್ಕೆ ಪರಾರಿಯಾಗುತ್ತಿದ್ದ ಇಬ್ಬರು ಆರೋಪಿಗಳಿಗೆ ಗುಂಡೇಟು

ರಾಮ್ ಗೋಪಾಲ್ ಮಿಶ್ರಾ ಅವರ ಕೊಲೆಗೆ ಬಳಸಲಾದ ಆಯುಧವನ್ನು ವಶಕ್ಕೆ ಪಡೆಯಲು ನಾನ್ಪಾರಾ ಪ್ರದೇಶಕ್ಕೆ ಪೊಲೀಸರು ತೆರಳಿದಾಗ ಎನ್‌ಕೌಂಟರ್ ಸಂಭವಿಸಿತ್ತು. ಪೊಲೀಸರನ್ನು ನೋಡುತ್ತಿದ್ದಂತೆ ಆರೋಪಿಗಳಾದ ಎಂ.ಡಿ. ಸರ್ಫರಾಜ್ ಮತ್ತು ಎಂ.ಡಿ. ತಾಲಿಬ್ ಲೋಡೆಡ್ ಗನ್‌ನಿಂದ ಗುಂಡು ಹಾರಿಸಿದ್ದರು. ಈ ವೇಳೆ ಪೊಲೀಸರು ಆತ್ಮ ರಕ್ಷಣೆಗಾಗಿ ಪ್ರತಿದಾಳಿ ನಡೆಸಿದಾಗ ಆರೋಪಿಗಳಿಬ್ಬರು ಗಾಯಗೊಂಡಿದ್ದರು. ಸದ್ಯ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಗಳು ನೇಪಾಳಕ್ಕೆ ಪರಾರಿಯಾಗಲು ಯೋಜನೆ ರೂಪಿಸಿದ್ದರು ಎನ್ನಲಾಗಿದೆ. ನನ್ಪಾರಾ ಪೊಲೀಸ್ ಠಾಣೆಯ ಬೈಪಾಸ್‌ನಲ್ಲಿ ಎನ್‌ಕೌಂಟರ್ ನಡೆದಿತ್ತು. ಪ್ರಕರಣದಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ, ʼʼಸರ್ಕಾರವು ಮೊದಲಿನಿಂದಲೂ ನಕಲಿ ಎನ್‌ಕೌಂಟರ್‌ ಮಾಡುವ ಮೂಲಕ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆʼʼ ಎಂದು ದೂರಿದ್ದಾರೆ.

ಈ ಸುದ್ದಿಯನ್ನೂ ಓದಿ: Bahraich Unrest: ಬಹ್ರೈಚ್‌ ಉದ್ವಿಗ್ನ-ಉಗ್ರ ಸ್ವರೂಪ ಪಡೆದುಕೊಂಡ ಗಲಭೆ; ಆಸ್ಪತ್ರೆ, ವಾಹನಗಳಿಗೆ ಬೆಂಕಿ