ತಿರುವನಂತಪುರಂ: ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿ ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಆರೋಪದಲ್ಲಿ ಮಲಯಾಳಂ ನಟ ಬೈಜು ಸಂತೋಷ್(Baiju Santhosh) ಅರೆಸ್ಟ್ ಆಗಿದ್ದಾರೆ. ನಿನ್ನೆ ತಡರಾತ್ರಿ ಈ ಘಟನೆ ನಡೆದಿದ್ದು, ಬೈಜು ವಿರುದ್ಧ ಪ್ರಕರಣ ದಾಖಲಾಗಿತ್ತು. ಇಂದು ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಮ್ಯೂಸಿಯಂ ಪೊಲೀಸರು ಬೈಜು ವಿರುದ್ಧ ಭಾರತೀಯ ನ್ಯಾಯ ಸಂಹಿತೆ(BNS) ಸೆಕ್ಷನ್ 281 ಮತ್ತು ಮೋಟರ್ ವಾಹನ ಕಾಯ್ದೆ 1988(ಮದ್ಯಪಾನ ಮಾಡಿ ವಾಹನ ಚಾಲನೆ)ಯ 185ನೇ ಸೆಕ್ಷನ್ನಡಿಯಲ್ಲಿ ಬೈಜು ವಿರುದ್ಧ ಪ್ರಕರಣ ದಾಖಲಾಗಿತ್ತು. ಹೀಗಾಗಿ ಅವರನ್ನು ಇಂದು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇನ್ನು ಅರೆಸ್ಟ್ ಆದ ಕೆಲವೇ ಗಂಟೆಗಳಲ್ಲಿ ಅವರನ್ನು ಠಾಣಾ ಜಾಮೀನಿನಲ್ಲಿ ರಿಲೀಸ್ ಮಾಡಲಾಗಿದೆ.
ತಿರುವನಂತಪುರಂ ನಗರ ವ್ಯಾಪ್ತಿಯ ಕೌಡಿಯಾರ್-ವೆಲ್ಲಯಂಬಲಂ ರಸ್ತೆಯಲ್ಲಿ ಭಾನುವಾರ ರಾತ್ರಿ 11.45ರ ಸುಮಾರಿಗೆ ಅಪಘಾತ ಸಂಭವಿಸಿದೆ. ನಟ ತನ್ನ ಕಾರನ್ನು ದ್ವಿಚಕ್ರ ವಾಹನಕ್ಕೆ ಮತ್ತು ನಂತರ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ ಎಂದು ವರದಿಯಾಗಿದೆ. ದ್ವಿಚಕ್ರ ವಾಹನ ಸವಾರನಿಗೆ ಯಾವುದೇ ಗಾಯಗಳಾಗಿಲ್ಲ ಮತ್ತು ಯಾವುದೇ ಪೊಲೀಸ್ ದೂರು ದಾಖಲಿಸಿಲ್ಲ.
ಪೊಲೀಸರು ಸ್ಥಳಕ್ಕೆ ಬಂದು ಸೋಮವಾರ ಮಧ್ಯಾಹ್ನ 12.30 ರ ಸುಮಾರಿಗೆ ಬೈಜು ಅವರನ್ನು ಬಂಧನ ಮಾಡಿದ್ದಾರೆ. ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಆಲ್ಕೋಹಾಲ್ ಪರೀಕ್ಷೆಗೆ ತನ್ನ ರಕ್ತದ ಮಾದರಿಗಳನ್ನು ಸಲ್ಲಿಸಲು ನಟ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲದೇ
ನಟನ ಕಾರನ್ನು ಜಪ್ತಿ ಮಾಡಲಾಗಿದೆ.
ಇನ್ನು ಬೈಜು ಅವರು 1981 ರಲ್ಲಿ ಬಾಲ ಕಲಾವಿದರಾಗಿ ತಮ್ಮ ಸಿನಿಮಾ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಹಲವಾರು ಮಲಯಾಳಂ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಕೆಲವು ದಿನಗಳ ಹಿಂದೆ ಸಹನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಎದುರಿಸುತ್ತಿರುವ ಕೊಲ್ಲಂ ಶಾಸಕ ಮತ್ತು ನಟ ಮುಖೇಶ್ ಅವರನ್ನು ಇಂದು ಪೊಲೀಸರು ಅರೆಸ್ಟ್ ಮಾಡಿದ್ದರು. ಅರೆಸ್ಟ್ ಆದ ಕೆಲವೇ ಗಂಟೆಗಳಲ್ಲಿ ಮುಖೇಶ್(Actor Mukesh) ಜಾಮೀನು ಪಡೆದು ಹೊರಬಂದಿದ್ದಾರೆ. ತಮ್ಮ ವಕೀಲರ ಜತೆಗೆ ಮುಖೇಶ್ ಎರ್ನಾಕುಲಂನಲ್ಲಿ ವಿಶೇಷ ತನಿಖಾ ತಂಡದ ಎದುರು ವಿಚಾರಣೆಗೆ ಹಾಜರಾಗಿದ್ದರು.
ಸುಮಾರು ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ ಎಸ್ಐಟಿ ತಂಡ ಬಳಿಕ ಅವರನ್ನು ಅವರದ್ದೇ ವಾಹನದ್ಲಿ ವೈದ್ಯಕೀಯ ತಪಾಸಣೆಗೆ ಕರೆದೊಯ್ದರು. ಇದಕ್ಕೂ ಮುನ್ನ ಸೆ.5 ರಂದು ಸೆಶನ್ಸ್ ಕೋರ್ಟ್ ಮುಖೇಶ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಿತ್ತು. ಆದರೆ ಯಾವುದೇ ಸಂದರ್ಭದಲ್ಲೂ ಎಷ್ಟೇ ಸಮಯವಾದರೂ ಅಧಿಕಾರಿಗಳ ಬಯಸಿದ್ದಲ್ಲಿ ಮುಖೇಶ್ ವಿಚಾರಣೆಗೆ ಹಾಜರಾಗಬೇಕೆಂದು ಕೋರ್ಟ್ ಷರತ್ತು ವಿಧಿಸಿತ್ತು.
ಈ ಸುದ್ದಿಯನ್ನೂ ಓದಿ: Actor Mukesh: ಮೀಟೂ ಕೇಸ್- ಮಲಯಾಳಂ ನಟ ಮುಖೇಶ್ ಅರೆಸ್ಟ್