Friday, 15th November 2024

ಬ್ರಿಜ್ ಭೂಷಣ್ ಶರಣ್ ಸಿಂಗ್’ಗೆ ಮಧ್ಯಂತರ ಜಾಮೀನು

ವದೆಹಲಿ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಪ್ರಕರಣದಲ್ಲಿ ನಿರ್ಗಮಿತ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಿಗೆ ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ಮಂಗಳವಾರ ಮಧ್ಯಂತರ ಜಾಮೀನು ನೀಡಿದೆ.

ಪ್ರಕರಣದ ಮತ್ತೊಬ್ಬ ಆರೋಪಿ ವಿನೋದ್ ತೋಮರ್‌ಗೂ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ. ಬ್ರಿಜ್ ಭೂಷಣ್ ಮತ್ತು ವಿನೋದ್ ತೋಮರ್ ಅವರ ಸಾಮಾನ್ಯ ಜಾಮೀನಿನ ವಿಚಾರಣೆ ಜು.20 ರಂದು ನಡೆಯಲಿದೆ.

ಮುಂದಿನ ವಿಚಾರಣೆಯ ತನಕ ಅವರಿಗೆ ಮಧ್ಯಂತರ ಜಾಮೀನು ನೀಡಲಾಗಿದೆ. ನ್ಯಾಯಾಲಯವು ಇಬ್ಬರು ಆರೋಪಿಗಳಿಗೆ ತಲಾ 25,000 ರೂ.ಗಳ ಜಾಮೀನು ಬಾಂಡ್ ಮೇಲೆ ಮಧ್ಯಂತರ ಜಾಮೀನು ನೀಡಿದೆ. ದೆಹಲಿ ಪೊಲೀಸರು ಜೂನ್ 15 ರಂದು ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ವಿನೋದ್ ತೋಮರ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು. ಮಹಿಳಾ ಕುಸ್ತಿಪಟುಗಳು ನೀಡಿದ ದೂರಿನ ಮೇರೆಗೆ ಈ ಪ್ರಕರಣವನ್ನು ದಾಖಲಿಸಲಾಗಿದೆ.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಪ್ರಾಪ್ತ ಕುಸ್ತಿಪಟುವಿಗೆ ಲೈಗಿಂಕ ಕಿರುಕುಳ ಪ್ರಕರಣದಲ್ಲಿ ರದ್ದುಪಡಿಸುವ ವರದಿಯನ್ನು ಸಲ್ಲಿಸಲಾಗಿದೆ. ಹಲವಾರು ಕುಸ್ತಿಪಟುಗಳ ದೂರಿನ ಮೇರೆಗೆ ಎರಡನೇ ಎಫ್‌ಐಆರ್ ದಾಖಲಿಸಲಾಗಿದೆ. ಪಟಿಯಾಲ ಹೌಸ್ ಕೋರ್ಟ್‌ನಲ್ಲಿ ದೆಹಲಿ ಪೊಲೀಸರು ಪೋಕ್ಸೋ ವಿಷಯದ ಬಗ್ಗೆ ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ರದ್ದು ವರದಿಯನ್ನು ಸಲ್ಲಿಸಿದರು.

ದಿಲ್ಲಿ ಪೊಲೀಸರು ಜೂನ್ 15 ರಂದು ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ ಸಿಂಗ್ ವಿರುದ್ಧ ಪೋಕ್ಸೊ ಪ್ರಕರಣವನ್ನು ರದ್ದುಗೊಳಿಸಲು ಶಿಫಾರಸು ಮಾಡುವ ವರದಿಯನ್ನು ಸಲ್ಲಿಸಿದ್ದಾರೆ. ಡಬ್ಲ್ಯುಎಫ್‌ಐ ಮುಖ್ಯಸ್ಥರ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ ಅಪ್ರಾಪ್ತ ವಯಸ್ಕ ತನ್ನ ಹೇಳಿಕೆಯನ್ನು ಬದಲಾಯಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಪ್ರಕರಣದಲ್ಲಿ ಯಾವುದೇ ಸಹಕಾರಿ ಸಾಕ್ಷ್ಯಗಳಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.