Friday, 22nd November 2024

ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ದೇಶಾದ್ಯಂತ ಇಂದು, ನಾಳೆ ಬ್ಯಾಂಕ್‌ ಮುಷ್ಕರ

ನವದೆಹಲಿ: ಎರಡು ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ ನಡಿ ಬ್ಯಾಂಕ್ ನೌಕರರು ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿರುವುದರಿಂದ ವ್ಯವಹಾರಗಳಿಗೆ ಸೋಮವಾರ  ವ್ಯತ್ಯಯವುಂಟಾಗಿದೆ.

ಇಂದು ಮತ್ತು ನಾಳೆ ಮುಷ್ಕರಕ್ಕೆ ಕರೆ ನೀಡಿವೆ. ಮುಷ್ಕರದಲ್ಲಿ 10 ಲಕ್ಷ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳು ಭಾಗವಹಿಸು ತ್ತಿದ್ದಾರೆ. ಖಾಸಗಿ ಬ್ಯಾಂಕುಗಳಾದ ಐಸಿಐಸಿಐ, ಹೆಚ್ ಡಿಎಫ್ ಸಿ ಮತ್ತು ಆಕ್ಸಿಸ್ ಬ್ಯಾಂಕುಗಳು ತೆರೆದಿವೆ.

ಸರ್ಕಾರದ ಹೂಡಿಕೆ ಯೋಜನೆಯಡಿ ಎರಡು ಸಾರ್ವಜನಿಕ ವಲಯ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲಾಗುವುದು ಎಂದು ಕೇಂದ್ರ ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.

ಕೇಂದ್ರ ಸರ್ಕಾರ ಈಗಾಗಲೇ ಐಡಿಬಿಐ ಬ್ಯಾಂಕನ್ನು ಅದರ ಅತಿಹೆಚ್ಚಿನ ಪಾಲಿನ ಷೇರನ್ನು 2019ರಲ್ಲಿ ಎಲ್ ಐಸಿಗೆ ಮಾರಾಟ ಮಾಡುವ ಮೂಲಕ ಖಾಸಗೀಕರಣಗೊಳಿಸಿತ್ತು. ಅಲ್ಲದೆ ಕಳೆದ ನಾಲ್ಕು ವರ್ಷಗಳಲ್ಲಿ 14 ಸಾರ್ವಜನಿಕ ವಲಯ ಬ್ಯಾಂಕುಗಳನ್ನು ಒಟ್ಟು ಮಾಡಿತ್ತು.

ಬ್ಯಾಂಕುಗಳ ಶಾಖೆಗಳಲ್ಲಿ ಮುಷ್ಕರದಿಂದ ಚೆಕ್ ಕ್ಲಿಯರೆನ್ಸ್, ಸರ್ಕಾರದ ವಹಿವಾಟುಗಳಿಗೆ ವ್ಯತ್ಯಯವಾಗಲಿದೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ. ಹಣ ಪಾವತಿ ಮೇಲೆ ಸಮಸ್ಯೆ ಆಗುವುದರಿಂದ ಹಣದ ಮಾರುಕಟ್ಟೆ ಮತ್ತು ಷೇರು ಮಾರುಕಟ್ಟೆ ಮೇಲೆ ಸಹ ಮುಷ್ಕರ ಪರಿಣಾಮ ಬೀರಲಿದೆ.