Wednesday, 18th September 2024

ಮಸೀದಿಗೆ ನುಗ್ಗಿ ನಿವೃತ್ತ ಪೊಲೀಸ್ ಅಧಿಕಾರಿ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಮಸೀದಿಗೆ ನುಗ್ಗಿ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ.

ನಗರದ ಗಂಟ್ಮುಲ್ಲಾ ಬಾರಾಮುಲ್ಲಾ ಪ್ರದೇಶದ ಮಸೀದಿಯಲ್ಲಿ ಮೊಹಮ್ಮದ್ ಶಫಿ ಎಂದು ಗುರುತಿಸಲಾದ ನಿವೃತ್ತ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಪ್ರಾರ್ಥನೆ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಳಿಕ ಪೊಲೀಸರು ಆ ಪ್ರದೇಶವನ್ನು ಸುತ್ತು ವರಿದಿದ್ದು, ಭಯೋತ್ಪಾದಕರ ಶೋಧ ನಡೆಸಿದ್ದಾರೆ.

“ನಿವೃತ್ತ ಪೊಲೀಸ್ ಅಧಿಕಾರಿ ಮೊಹಮ್ಮದ್ ಶಫಿ ಮಸೀದಿಯಲ್ಲಿ ಆಜಾನ್ ಪ್ರಾರ್ಥನೆ ಮಾಡುತ್ತಿದ್ದಾಗ ಅವರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದರು. ಪೊಲೀಸರು ಆ ಪ್ರದೇಶವನ್ನು ಸುತ್ತುವರಿದಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಕಾಯಲಾಗುತ್ತಿದೆ” ಎಂದು ಕಾಶ್ಮೀರ ವಲಯ ಪೊಲೀಸರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚಿನ ದಿನಗಳಲ್ಲಿ ಹಲವಾರು ಟಾರ್ಗೆಟ್‌ ಹತ್ಯೆಗಳು ನಡೆದಿವೆ. ಈ ತಿಂಗಳ ಆರಂಭದಲ್ಲಿ ಶ್ರೀನಗರದಲ್ಲಿ ಪೊಲೀಸ್ ಪೇದೆ ಯೊಬ್ಬರಿಗೆ ಭಯೋತ್ಪಾದಕರು ಗುಂಡು ಹಾರಿಸಿ ಗಾಯಗೊಳಿಸಿದ್ದರು. ಮೊಹಮ್ಮದ್ ಹಫೀಜ್ ಚಾದ್ ಎಂದು ಗುರುತಿಸಲಾದ ಈ ಕಾನ್‌ಸ್ಟೇಬಲ್‌ನ ಹಮ್ದನಿಯಾ ಕಾಲೋನಿ ಬೆಮಿನಾದಲ್ಲಿರುವ ಮನೆಯ ಬಳಿ ದಾಳಿ ನಡೆಸಲಾಗಿದೆ.

ಇದಕ್ಕೂ ಮೊದಲು ಅಕ್ಟೋಬರ್‌ನಲ್ಲಿ, ಮಸ್ರೂರ್ ಅಹ್ಮದ್ ವಾನಿ ಎಂದು ಗುರುತಿಸಲಾದ ಪೊಲೀಸ್ ಇನ್ಸ್‌ಪೆಕ್ಟರ್ ಕ್ರಿಕೆಟ್ ಆಡುತ್ತಿದ್ದಾಗ ಅವರ ಮೇಲೆ ದಾಳಿ ನಡೆಸಲಾಗಿತ್ತು.

Leave a Reply

Your email address will not be published. Required fields are marked *