ಇಸ್ರೇಲ್ (Israel) ಮತ್ತು ಇರಾನ್ (Iran) ನಡುವೆ ಸಂಘರ್ಷದ ವಾತಾವರಣದಿಂದಾಗಿ ಇರಾನ್‌ಗೆ ಅಕ್ಕಿ ರಫ್ತು (Rice Exports) ಮಾಡುವ ದೇಶಗಳಿಗೂ ಆತಂಕ ಶುರುವಾಗಿದೆ. ಯುದ್ಧದ ವಾತಾವರಣದಿಂದಾಗಿ ಅಕ್ಕಿ ರಫ್ತಿಗೆ ಪಾವತಿ ವಿಳಂಬವಾಗುವ ಸಾಧ್ಯತೆ ಇದೆ. ಇರಾನ್‌ಗೆ ಅಕ್ಕಿ ರಫ್ತು (Basmati Rice Exports) ಮಾಡುವ ದೇಶಗಳಲ್ಲಿ ಭಾರತವೂ ಸೇರಿದೆ. ಭಾರತದ ವಾಣಿಜ್ಯ ಸಚಿವಾಲಯದ ಪ್ರಕಾರ 2024- 25ರ ಏಪ್ರಿಲ್- ಜುಲೈ ತಿಂಗಳ ಅವಧಿಯಲ್ಲಿ ಭಾರತದಿಂದ 1.91 ಮಿಲಿಯನ್ ಟನ್ ಬಾಸ್ಮತಿ ಅಕ್ಕಿ ರಫ್ತು ಮಾಡಲಾಗಿತ್ತು. ಇದರಲ್ಲಿ ಶೇ. 19ರಷ್ಟು ಅಕ್ಕಿ ಇರಾನ್‌ಗೆ ಸಾಗಣೆ ಮಾಡಲಾಗಿತ್ತು.
ಭಾರತ ಸರ್ಕಾರವು ಬಾಸ್ಮತಿ ಅಕ್ಕಿಯ ಮೇಲಿನ ಕನಿಷ್ಠ ರಫ್ತು ಬೆಲೆ ಟನ್‌ಗೆ 79,828.83 ರೂ. ತೆಗೆದು ಹಾಕಿತ್ತು. ಅದಾಗಿ ಕೆಲವೇ ದಿನಗಳಲ್ಲಿ ಇಸ್ರೇಲ್- ಇರಾನ್ ಸಂಘರ್ಷ ಉಲ್ಬಣಗೊಂಡಿದೆ. ಸುಗಂಧಭರಿತ ಅಕ್ಕಿಯ ಪ್ರಮುಖ ಆಮದು ದೇಶವಾದ ಇರಾನ್‌ಗೆ ಅಕ್ಕಿ ಸಾಗಣೆ ಮಾಡುವುದ ಸಮಸ್ಯೆಯಾಗಿದೆ.
ಇರಾನ್ ಮತ್ತು ಇಸ್ರೇಲ್ ಸಂಘರ್ಷದಿಂದ ಇರಾನ್‌ಗೆ ಅಕ್ಕಿ ರಫ್ತು ಪ್ರಕ್ರಿಯೆ ನಿಧಾನವಾಗುತ್ತಿರುವುದು ಮಾತ್ರವಲ್ಲ ರಫ್ತಿನ ಪಾವತಿ ವಿಳಂಬವಾಗುವ ಸಾಧ್ಯತೆಯಿದೆ ಎಂದು ಅಕ್ಕಿ ಉದ್ಯಮದ ಮೂಲಗಳು ತಿಳಿಸಿವೆ.
ಭಾರತದಿಂದ ಇರಾನಿಗೆ ಬಾಸ್ಮತಿ ಅಕ್ಕಿ ರಫ್ತು ಮುಂದುವರಿಯುತ್ತದೋ ಇಲ್ಲವೋ ಎಂಬುದು ಇರಾನ್‌ನ ಮೇಲೆ ಇಸ್ರೇಲ್ ಕೈಗೊಳ್ಳಬಹುದಾದ ಕ್ರಮಗಳ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಅಕ್ಕಿ ರಫ್ತು ಉದ್ಯಮವು ಮಧ್ಯಪ್ರಾಚ್ಯದಲ್ಲಿನ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.
50,000 ಟನ್ ಅಕ್ಕಿ ರವಾನೆ
ಇರಾನ್‌ನ ಸರ್ಕಾರಿ ಟ್ರೇಡಿಂಗ್ ಕಾರ್ಪೊರೇಷನ್ (GTC) ಇತ್ತೀಚೆಗೆ ಭಾರತದಿಂದ 0.1 ಮಿಲಿಯನ್ ಟನ್ ಬಾಸ್ಮತಿ ಅಕ್ಕಿಯನ್ನು ಖರೀದಿಸಲು ಟೆಂಡರ್ ಹಾಕಿತ್ತು. ಇದು ಅಕ್ಟೋಬರ್ 30ರೊಳಗೆ ಸರಬರಾಜಾಗುವ ನಿರೀಕ್ಷೆಯಿದೆ. ಇದರಲ್ಲಿ ಸುಮಾರು 50,000 ಟನ್ ಈಗಾಗಲೇ ರವಾನೆಯಾಗಿದೆ ಮತ್ತು ಉಳಿದವುಗಳು ಅಕ್ಟೋಬರ್ 15 ರೊಳಗೆ ಭಾರತದಿಂದ ಬಂದರುಗಳಿಂದ ಹೋರಾಡಬೇಕಿದೆ.
ಆತಂಕದಲ್ಲಿ ರೈತರು, ರಫ್ತುದಾರರು
ಭಾರತ ಮತ್ತು ಇರಾನ್ ನಡುವಿನ ಅಕ್ಕಿ ವ್ಯಾಪಾರದಲ್ಲಿ ಎದುರಾಗುವ ತೊಂದರೆಗಳು ರೈತರು ಮತ್ತು ರಫ್ತುದಾರರಿಗೆ ಅಪಾರ ನಷ್ಟವನ್ನು ಉಂಟು ಮಾಡುವ ಸಾಧ್ಯತೆ ಇದೆ ಎಂದು ಪ್ರಮುಖ ಬಾಸ್ಮತಿ ಅಕ್ಕಿ ರಫ್ತುದಾರರಾದ ಜೋಸನ್ ಗ್ರೇನ್‌ನ ವ್ಯವಸ್ಥಾಪಕ ನಿರ್ದೇಶಕ ರಂಜಿತ್ ಸಿಂಗ್ ಜೋಸ್ಸನ್ ತಿಳಿಸಿದ್ದಾರೆ.
ಇರಾನ್ ಮತ್ತು ಇಸ್ರೇಲ್ ಸಂಘರ್ಷದ ವಾತಾವರಣ ಕಳವಳ ಉಂಟು ಮಾಡಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳು ಭಾರತದಿಂದ ಅಕ್ಕಿ ಆಮದು ಮಾಡಿಕೊಳ್ಳುವ ಪ್ರಮುಖ ತಾಣಗಳಾಗಿವೆ.
ಥಾಯ್ ಬಿಳಿ ಅಕ್ಕಿ ರಫ್ತು ಪ್ರಮಾಣ ಕುಸಿತ
ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಏಷ್ಯಾದಲ್ಲಿ ಅಕ್ಕಿ ಬೆಲೆಗಳು 16 ವರ್ಷಗಳಲ್ಲಿ ಅತಿ ಹೆಚ್ಚು ಕುಸಿದಿವೆ. ಯಾಕೆಂದರೆ ಭಾರತವು ಕೆಲವು ರಫ್ತು ನಿರ್ಬಂಧಗಳನ್ನು ಸಡಿಲಿಸಿದ ಬಳಿಕ ಪೂರೈಕೆಯ ಕಾಳಜಿ ಕಡಿಮೆಯಾಗಿದೆ.
ಥಾಯ್ ಅಕ್ಕಿ ರಫ್ತುದಾರರ ಸಂಘದ ಪ್ರಕಾರ ಥಾಯ್ ಬಿಳಿ ಅಕ್ಕಿ ರಫ್ತು ಪ್ರಮಾಣ ಶೇ. 11ರಷ್ಟು ಕುಸಿತವಾಗಿದೆ. 2008ರ ಬಳಿಕ ಇದು ಅತೀ ದೊಡ್ಡ ಕುಸಿತವಾಗಿದೆ. ಇದರಿಂದ ಬೆಲೆಗಳಲ್ಲಿ ದೀರ್ಘಾವಧಿ ಇಳಿಕೆ ಮಾಡಬೇಕಾದ ಪರಿಸ್ಥಿತಿ ಇದೆ. ಕಳೆದ 15 ತಿಂಗಳುಗಳಿಂದ ಇದೇ ಪರಿಸ್ಥಿತಿ ಇದೆ ಎಂದು ಸಂಸ್ಥೆ ತಿಳಿಸಿದೆ.
FASTag Recharge : ಫಾಸ್ಟ್ಯಾಗ್ ರೀಚಾರ್ಚ್ ಇನ್ನಷ್ಟು ಸುಲಭ; ನಿಯಮದಲ್ಲಿ ಆದ ಬದಲಾವಣೆಯೇನು?
ಅಕ್ಕಿ ರಫ್ತು ನಿಯಮ ಸಡಿಲಿಕೆ
ಭಾರತ ಸರ್ಕಾರವು ಇತ್ತೀಚೆಗೆ ಕುಚ್ಚಲಕ್ಕಿಯ ಮೇಲಿನ ರಫ್ತು ಸುಂಕವನ್ನು ಶೇ. 20 ರಿಂದ ಶೇ. 10ಕ್ಕೆ ಇಳಿಸಿತು. ಬಾಸ್ಮತಿ ಅಲ್ಲದ ಬಿಳಿ ಅಕ್ಕಿ ಸಾಗಣೆಯ ಮೇಲಿನ ನಿಷೇಧವನ್ನು ತೆಗೆದುಹಾಕಿತು. ಅದರ ಮೇಲೆ ಟನ್ ಗೆ ಕನಿಷ್ಠ 41,174.87 ರೂ. ರಫ್ತು ಬೆಲೆಯನ್ನು ವಿಧಿಸಿತು.
ಕಳೆದ ದಶಕದಲ್ಲಿ ಭಾರತವು ವಿಶ್ವದ ಅತಿದೊಡ್ಡ ಅಕ್ಕಿ ರಫ್ತುದಾರ ದೇಶವಾಗಿದ್ದು, ಅಕ್ಕಿ ವ್ಯಾಪಾರದಲ್ಲಿ ಸುಮಾರು ಶೇ. 35 ರಿಂದ 40 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.