Wednesday, 20th November 2024

Bengal hospital: ಆಸ್ಪತ್ರೆಯಲ್ಲಿ ಬೀದಿನಾಯಿಗಳ ಪಾಲಾದ ಆರು ತಿಂಗಳ ಹಸುಗೂಸು!

ಬೀದಿ ನಾಯಿಗಳಿಗೆ ಭಯ ಪಡುವವರೇ ಹೆಚ್ಚು. ಎಷ್ಟೋ ಪ್ರಕರಣಗಳಲ್ಲಿ ಸಣ್ಣ ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ಮಾಡಿರುವ ಕುರಿತ ವರದಿಗಳನ್ನು ಓದಿರುತ್ತೇವೆ. ಹಲವು ಪ್ರಕರಣಗಳಲ್ಲಿ ಬೀದಿ ನಾಯಿಗಳು ಸೇರಿ ಮಕ್ಕಳ ಮೇಲೆ ಎರಗಿ ಕೊಂದಿರುವ ಘಟನೆಯೂ ಬೆಳಕಿಗೆ ಬಂದಿವೆ. ಇದೀಗ ಇಂತದೇ ಘಟನೆಯೊಂದು ಬೆಳಕಿಗೆ ಬಂದಿದ್ದು, ಹಸುಗೂಸನ್ನು ನಾಯಿ ಕಚ್ಚಿ ಸಾಯಿಸಿರುವ ಹೃದಯ ವಿದ್ರಾವಕ ಘಟನೆ (Tragedy News) ನಡೆದಿದೆ. ಕೋಲ್ಕತ್ತಾದಲ್ಲಿ ಈ ಭಯಾನಕ ಘಟನೆ ನಡೆದಿದ್ದು, ಪಶ್ಚಿಮ ಬಂಗಾಳದ ಬಂಕುರಾದಲ್ಲಿರುವ ಸೋನಮುಖಿ ಗ್ರಾಮೀಣ ಆಸ್ಪತ್ರೆಯ (Bengal hospital) ಸಿಬ್ಬಂದಿಯ ಬೇಜವಾಬ್ದಾರಿಯಿಂದ ಹಸುಗೂಸೊಂದು ಶ್ವಾನದ ಪಾಲಾಗಿದೆ.

ಹೌದು, ಕೊಚ್ಡಿಹಿ ಗ್ರಾಮದ ಪ್ರಿಯಾ ರಾಯ್ ಎಂಬುವವರು ಬಂಕುರಾದಲ್ಲಿರುವ ಸೋನಮುಖಿ ಗ್ರಾಮೀಣ ಆಸ್ಪತ್ರೆಗೆ ಆರು ತಿಂಗಳ ಮಾಸಿಕ ತಪಾಸಣೆಗೆ ಬಂದಿದ್ದು, ಆಕೆಗೆ ಅಲ್ಲಿಯೇ ಅವರಿಗೆ ಪ್ರಸವದ ನೋವು ಕಾಣಿಸಿಕೊಂಡಿದೆ. ದುರಾದೃಷ್ಟವಶಾತ್ ಆಸ್ಪತ್ರೆಯ ಶೌಚಾಲಯದಲ್ಲಿ ಹೆರಿಗೆ ಆಗಿದ್ದು, ಪ್ರಿಯಾ ಅವಧಿಪೂರ್ವ ಜನಿಸಿದೆ. ಆದರೆ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಆಸ್ಪತ್ರೆ ವರಾಂಡದಲ್ಲಿ ಸುತ್ತಾಡುತ್ತಿದ್ದ ಬೀದಿ ನಾಯಿಯೊಂದು ನವಜಾತ ಶಿಶುವನ್ನು ಹೊತ್ತುಕೊಂಡು ಹೋಗಿದೆ.

ಈ ವೇಳೆ ನಾಯಿಯನ್ನು ಓಡಿಸಲು ಪ್ರಯತ್ನಪಟ್ಟರೂ, ಮಗುವನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದ್ದು, ಆಸ್ಪತೆ ಸಿಬ್ಬಂದಿಯ ಬೇಜವಾಬ್ದಾರಿಯೇ ಇದಕ್ಕೆ ಕಾರಣವೆಂದು ಕುಟುಂಬಸ್ಥರು ಆರೋಪಿದ್ದಾರೆ. ಅಷ್ಟೇ ಅಲ್ಲದೇ ಪ್ರಿಯಾಗೆ ಹೆರಿಗೆ ನೋವು ಕಾಣಿಸಿಕೊಳುತ್ತಿದಂತೆ ತಕ್ಷಣವೇ ಆಸ್ಪತ್ರೆಯ ಸಿಬ್ಬಂದಿಗೆ ತಿಳಿಸಿದ್ದು, ಶೂಶ್ರೂಷೆ ನೀಡುವಂತೆ ಮನವಿ ಮಾಡಿದ್ದೇವು. ಆದರೆ ನಮ್ಮ ಸಹಾಯಕ್ಕೆ ಬಾರದ ಸಿಬ್ಬಂದಿಗಳು ಅಸಡ್ಡೆ ತೋರಿದ್ದು, ಅವರಿಂದ ಯಾವುದೇ ಸ್ಪಂದನೆ ಸಿಗಲಿಲ್ಲ. ಪರಿಣಾಮ ನಾವಿಂದು ನಮ್ಮ ಮಗುವನ್ನು ಕಳೆದುಕೊಂಡಿದ್ದು, ನಮ್ಮ ಕಣ್ಣೆದುರೇ ಮಗುವನ್ನು ಹೊತ್ತೊಯ್ಯುತ್ತಿರುವ ಬೀದಿ ನಾಯಿಯನ್ನು ನೋಡಿದ್ದೇವೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಇದನ್ನೂ ಓದಿ: Viral Video: ಆನ್‍ಲೈನ್‌ನಲ್ಲಿ ತರಕಾರಿ ಖರೀದಿಸೋ ಗ್ರಾಹಕರೇ ಎಚ್ಚರ…ಎಚ್ಚರ! ತೂಕದಲ್ಲಿ ನಡೀತಿದೆ ಭಾರೀ ಮೋಸ- ಈ ವಿಡಿಯೊ ನೋಡಿ

ಆಘಾತಕಾರಿ ಸಂಗತಿಯೆಂದರೆ, ಘಟನೆಯ ಬಳಿಕವೂ ಬೀದಿ ನಾಯಿಗಳು ಆಸ್ಪತ್ರೆಯ ಆವರಣದೊಳಗೆ ಓಡಾಡುವುದನ್ನು ಸ್ಥಳೀಯರು ಗಮನಿಸಿದ್ದು, ಪ್ರತ್ಯಕ್ಷದರ್ಶಿಗಳ ಪ್ರಕಾರ, ಬೀದಿ ನಾಯಿ ನವಜಾತ ಹೆಣ್ಣುಮಗುವಿನ ಶವವನ್ನು ಕಚ್ಚಿಕೊಂಡು ಆಸ್ಪತ್ರೆಯ ಆವರಣದಲ್ಲಿ ಸುತ್ತಾಡುತ್ತಿತ್ತು. ಆ ಮಗು ಜೀವಂತವಾಗಿದೆ ಎಂದು ಭಾವಿಸಿ, ನಾಯಿಯನ್ನು ಅಟ್ಟಿಸಿಕೊಂಡು ಹೋದಾಗ ಅದು ಶವವನ್ನು ಬಿಟ್ಟು ಓಡಿ ಹೋಗಿತ್ತು ಎಂದು ತಿಳಿಸಿದ್ದಾರೆ.

ಈ ಘಟನೆ ಬಗ್ಗೆ ಪ್ರತ್ಯದರ್ಶಿಗಳು ಭಯವನ್ನು ವ್ಯಕ್ತಪಡಿಸಿದ್ದು, ಆಸ್ಪತ್ರೆಯ ಆವರಣದೊಳಗೆ ಒಂದು ವೇಳೆ ಇಂತಹ ಘಟನೆಗಳು ನಡೆಯುತ್ತಿದ್ದರೆ, ನವಜಾತ ಶಿಶುಗಳನ್ನು ಚಿಕಿತ್ಸೆಗೆ ಹೇಗೆ ಕರೆತರಲಿ ಎಂದು ಪ್ರಶ್ನಿಸಿದ್ದಾರೆ. ಇದೊಂದು ಭಯಾನಕ ಘಟನೆ, ಇದನ್ನು ಗಮನಿಸಿದ ಮೇಲೆ ಆಸ್ಪತ್ರೆ ಮೇಲಿನ ನಂಬಿಕೆಯೇ ಹೊರಟು ಹೋಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಕೂಡಲೇ ಆಸ್ಪತ್ರೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದು, ಕುಟುಂಬ ಮತ್ತು ಆಸ್ಪತ್ರೆ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ. ನಂತರ ಸೋನಮುಖಿ ಪೊಲೀಸ್ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿರುವುದಾಗಿ ತಿಳಿಸಿದ್ದಾರೆ.

ಇನ್ನು ಘಟನೆ ಕುರಿತು ರಾಜಕೀಯ ನಾಯಕರು ಆಕ್ರೋಶ ಹೊರ ಹಾಕಿದ್ದು, ವಿರೋಧ ಪಕ್ಷದ ನಾಯಕರುಗಳು ಮಮತಾ ಬ್ಯಾನರ್ಜಿ ಸರ್ಕಾರದ ಆಡಳಿತ ವೈಖರಿ ಬಗ್ಗೆ ಟೀಕೆ ಪ್ರಹಾರ ನಡೆಸಿದ್ದಾರೆ.