Saturday, 14th December 2024

ಮುಂಬೈ ತಲುಪಿದ ಭಾರತ್ ಜೋಡೋ ನ್ಯಾಯ್ ಯಾತ್ರೆ

ವದೆಹಲಿ: ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯು ಮುಂಬೈ ತಲುಪಿದ್ದು, ಸಮಾರೋಪದ ಅಂಗವಾಗಿ ಭಾನುವಾರ ನಡೆಯಲಿರುವ ರ‍್ಯಾಲಿಯಲ್ಲಿ ಹಲವಾರು ಹಿರಿಯ ವಿರೋಧ ಪಕ್ಷದ ನಾಯಕರು ಭಾಗವಹಿಸಲಿದ್ದಾರೆ.

ಈ ರ್ಯಾಲಿಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸೇರಿದಂತೆ ಇಂಡಿ ಮೈತ್ರಿಕೂಟದ ಹಲವಾರು ಘಟಕ ಪಕ್ಷಗಳ ನಾಯಕರು ಭಾಗವಹಿಸಲಿದ್ದಾರೆ.

ಮಾ.17 ರಂದು ಮುಂಬೈನ ದಾದರ್ ಪ್ರದೇಶದ ಶಿವಾಜಿ ಪಾರ್ಕಿನಲ್ಲಿ ನಡೆಯಲಿರುವ ರ್ಯಾಲಿಯಲ್ಲಿ ಸ್ಟಾಲಿನ್, ಅಖಿಲೇಶ್ ಯಾದವ್ ಮತ್ತು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಭಾಗವಹಿಸುವುದನ್ನು ಖಚಿತಪಡಿಸಿದ್ದಾರೆ ಎಂದು ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ವಿಜಯ್ ವಾಡೆಟ್ಟಿವಾರ್ ತಿಳಿಸಿದ್ದಾರೆ.

ಆಮ್ ಆದ್ಮಿ ಪಕ್ಷದ ಪ್ರತಿನಿಧಿಗಳು ಮತ್ತು ಪ್ರತಿಪಕ್ಷಗಳ ಮೈತ್ರಿಕೂಟದ ಇತರ ಕೆಲವು ಘಟಕಗಳು ಸಹ ರ‍್ಯಾಲಿಯಲ್ಲಿ ಭಾಗವಹಿಸಲಿವೆ ಎಂದು ವಿಜಯ್ ವಾಡೆಟ್ಟಿವಾರ್ ಹೇಳಿದರು.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಎನ್ಸಿಪಿ (ಶರದ್ ಚಂದ್ರ ಪವಾರ್) ಅಧ್ಯಕ್ಷ ಶರದ್ ಪವಾರ್ ಈ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.

“ಲೋಕಸಭಾ ಚುನಾವಣೆಯನ್ನು ಶನಿವಾರ ಘೋಷಿಸಲಾಗುವುದು, ಆದ್ದರಿಂದ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಮಾರೋಪ ರ‍್ಯಾಲಿಯ ವೆಚ್ಚವು ನಮ್ಮ ಚುನಾವಣಾ ವೆಚ್ಚದಲ್ಲಿ ಪ್ರತಿಫಲಿಸುತ್ತದೆ” ಎಂದು ವಾಡೆಟ್ಟಿವಾರ್ ಹೇಳಿದರು.