ಬೋದರ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಬುಧವಾರ ಮಹಾರಾಷ್ಟ್ರದಿಂದ ಮಧ್ಯಪ್ರದೇಶದ ಬುರ್ಹಾನ್ಪುರ ಜಿಲ್ಲೆಯ ಬೋದರ್ಲಿ ಗ್ರಾಮವನ್ನು ಪ್ರವೇಶಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ತಮ್ಮ ಅಭಿಯಾನವು ಸಮಾಜದಲ್ಲಿ ಹರಡುತ್ತಿರುವ ದ್ವೇಷ, ಹಿಂಸೆ ಮತ್ತು ಭಯದ ವಿರುದ್ಧ ವಾಗಿದೆ ಎಂದರು. ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದಿದ್ದ ಅಪಾರ ಸಂಖ್ಯೆಯ ಕಾಂಗ್ರೆಸ್ಸಿಗರು ಬೋದರ್ಲಿಗೆ ಆಗಮಿಸಿ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ರಾಜ್ಯದಲ್ಲಿ 12 ದಿನಗಳ ಕಾಲ ನಡೆಯಲಿರುವ ಸುದೀರ್ಘ ಯಾತ್ರೆಯನ್ನು ಔಪಚಾರಿಕವಾಗಿ ಪ್ರಾರಂಭಿಸಲು, ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರು ಮಧ್ಯಪ್ರದೇಶ ಪಕ್ಷದ ಮುಖ್ಯಸ್ಥ ಕಮಲ್ ನಾಥ್ ಅವರಿಗೆ ತ್ರಿವರ್ಣ ಧ್ವಜವನ್ನು ಹಸ್ತಾಂತರಿಸಿದರು.
ಯಾತ್ರೆ ರಾಜಸ್ಥಾನಕ್ಕೆ ಪ್ರವೇಶಿಸುವ ಮೊದಲು ರಾಜ್ಯದಲ್ಲಿ 380 ಕಿ.ಮೀ. ಕ್ರಮಿಸಲಿದೆ. 6,000 ಜನಸಂಖ್ಯೆಯನ್ನು ಹೊಂದಿರುವ ಬೋದರ್ಲಿ ಗ್ರಾಮವನ್ನು ಬಾಳೆ ಎಲೆಗಳಿಂದ ಅಲಂಕರಿಸ ಲಾಗಿತ್ತು.
‘ಈ ಯಾತ್ರೆಯು ದೇಶದಲ್ಲಿ ಹರಡುತ್ತಿರುವ ದ್ವೇಷ, ಹಿಂಸೆ ಮತ್ತು ಭಯದ ವಿರುದ್ಧವಾಗಿದೆ. ನಾವು ಕನ್ಯಾಕುಮಾರಿಯಿಂದ ತ್ರಿವರ್ಣ ಧ್ವಜವನ್ನು ನಮ್ಮ ಕೈಯಲ್ಲಿ ಹಿಡಿದುಕೊಂಡು ಭಾರತ್ ಜೋಡೋ ಯಾತ್ರೆಯನ್ನು ಪ್ರಾರಂಭಿಸಿದ್ದೇವೆ. ಈ ತ್ರಿವರ್ಣ ಧ್ವಜವು ಶ್ರೀನಗರ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಹೇಳಿದರು.
ಮಧ್ಯಪ್ರದೇಶದಲ್ಲಿ ಯಾತ್ರೆಯನ್ನು ಸ್ವಾಗತಿಸಿದ ಕಮಲ್ ನಾಥ್, ಇದು ರಾಜ್ಯದಲ್ಲಿ ಅತ್ಯಂತ ಯಶಸ್ವಿಯಾಗಲಿದೆ ಎಂದು ಹೇಳಿದ್ದಾರೆ. ಈ ಸಂದರ್ಭ ದಲ್ಲಿ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್, ಮಧ್ಯ ಪ್ರದೇಶದ ವಿಧಾನಸಭೆ ವಿರೋಧ ಪಕ್ಷದ ನಾಯಕ ಗೋವಿಂದ್ ಸಿಂಗ್, ಮಾಜಿ ಕೇಂದ್ರ ಸಚಿವರಾದ ಸುರೇಶ್ ಪಚೌರಿ ಮತ್ತು ಅರುಣ್ ಯಾದವ್ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.