Monday, 9th December 2024

ಭಾರತ ಬಂದ್‌ಗೆ ಹಲವು ರಾಜ್ಯಗಳಲ್ಲಿ ಮಿಶ್ರ ಪ್ರತಿಕ್ರಿಯೆ

ವದೆಹಲಿ: ಹಿಂದುಳಿದ ಸಮುದಾಯಗಳಿಗೆ ರಕ್ಷಣೆ ಒದಗಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಮತ್ತು ಆದಿವಾಸಿ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್‌ಗೆ ಹಲವು ರಾಜ್ಯಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಿಹಾರದಲ್ಲಿ ವೇದಿಕೆ ನಿರ್ಮಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಲಾಠಿ ಚಾರ್ಜ್‌ ಮಾಡಿ ಜನರ ಗುಂಪನ್ನು ಚದುರಿಸಿದ್ದಾರೆ.

ಅಲ್ಲದೆ ಪ್ರತಿಭಟನನಿರತರು ಬಿಹಾರದ ಹಲವೆಡೆ ರಸ್ತೆ ತಡೆ ನಡೆಸಿದ್ದು, ಬೃಹತ್‌ ಪ್ರಮಾಣದಲ್ಲಿ ಸಂಚಾರ ದಟ್ಟಣೆಗೆ ಕಾರಣವಾಯಿತು. ರಸ್ತೆ ತಡೆದ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಉಳಿದಂತೆ ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಜಾರ್ಖಂಡ್‌, ಉತ್ತರಪ್ರದೇಶ, ದೆಹಲಿ ರಾಜ್ಯಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ನ್ಯಾಯ ಮತ್ತು ಸಮಾನತೆ ಒದಗಿಸುವುದೂ ಸೇರಿದಂತೆ ಹಲವು ಬೇಡಿಕೆಗಳ ಪಟ್ಟಿಯನ್ನು ದಲಿತ ಮತ್ತು ಆದಿವಾಸಿ ಸಂಘಟನೆಗಳ ರಾಷ್ಟ್ರೀಯ ಒಕ್ಕೂಟವು (ಎನ್‌ಎಸಿಡಿಎಒಆರ್‌) ಸರ್ಕಾರದ ಮುಂದಿಟ್ಟಿದೆ.