Sunday, 15th December 2024

ಪ್ರಧಾನಿ ಸ್ವಾಗತಕ್ಕೆ ಭ್ರಷ್ಟಾಚಾರ ಆರೋಪ ಪೋಸ್ಟರ್ ಸ್ವಾಗತ…!

ಭೋಪಾಲ್: ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರದೇಶಕ್ಕೆ ಭೇಟಿ ನೀಡುವ ಮುನ್ನ ದಿನ ಭೋಪಾಲ್, ಇಂಧೋರ್ ಹಾಗೂ ಇತರ ಕೆಲ ನಗರಗಳಲ್ಲಿ, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ರುವ ಪೋಸ್ಟರ್ ಗಳು ರಾರಾಜಿಸುತ್ತಿವೆ.

ಬಿಜೆಪಿ ಆಡಳಿತದ ಈ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಈ ಪೋಸ್ಟರ್ ಗಳನ್ನು ಹಚ್ಚಿದೆ ಎನ್ನುವುದು ಬಿಜೆಪಿ ಆರೋಪ. ಆದರೆ ಕಾಂಗ್ರೆಸ್ ಭ್ರಷ್ಟಾಚಾರದಿಂದ ಬೇಸತ್ತ ಜನತೆ ಹಚ್ಚಿದ್ದಾರೆ ಎಂದು ಸಮರ್ಥಿಸಿದೆ. ಈ ವರ್ಷದ ಕೊನೆಗೆ ವಿಧಾನಸಭಾ ಚುನಾವಣೆ ನಡೆಯುವ ರಾಜ್ಯದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವಿನ ವಾಕ್ಸಮರಕ್ಕೆ ಇದು ವೇದಿಕೆಯಾಗಿದೆ.

ಭೋಪಾಲ್, ಇಂಧೋರ್, ಗ್ವಾಲಿಯರ್, ಸೆಹೋರ್, ರೇವಾ, ಮಂದಸಾರ್, ಉಜ್ಜಯಿನಿ, ಬುಧ್ನಿ ಮತ್ತು ಇತರ ಕೆಲ ನಗರಗಳಲ್ಲಿ ಈ ಪೋಸ್ಟರ್ಗಳು ರಾರಾಜಿಸುತ್ತಿರುವ ವಿಡಿಯೊ ತುಣುಕನ್ನು ಮಧ್ಯಪ್ರದೇಶ ಕಾಂಗ್ರೆಸ್ ತನ್ನ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಿದೆ. ‘ಬುಧ್ನಿ’ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಪ್ರತಿನಿಧಿಸುವ ವಿಧಾನ ಸಭಾ ಕ್ಷೇತ್ರವಾಗಿದೆ.

“ಪೋಸ್ಟರ್ ನಲ್ಲಿ ಒಂದು ಕ್ಯೂಆರ್ ಕೋಡ್ ಹಾಗೂ ಮುಖ್ಯಮಂತ್ರಿಯ ಭಾವಚಿತ್ರ ವಿದ್ದು, “50% ತನ್ನಿ ಹಾಗೂ ಕೆಲಸ ಮಾಡಿಸಿಕೊಳ್ಳಿ” (50% ಲಾವೊ, ಕಾಮ್ ಕರಾವೊ) ಎಂಬ ಸಂದೇಶವಿದೆ. ಜತೆಗೆ ಆನ್ಲೈನ್ ಪಾವತಿ ಆಯಪ್ ‘ಫೋನ್ ಪೇ’ ಯ ಸಂಕೇತವನ್ನು ಬಳಸಲಾಗಿದೆ.

“ಕರ್ನಾಟಕದಲ್ಲಿ 40% ಕಮಿಷನ್ ಇತ್ತು. ಭ್ರಷ್ಟಾಚಾರದಲ್ಲಿ ಶಿವರಾಜ್ ಕರ್ನಾಟಕವನ್ನು ಸೋಲಿಸಿದ್ದಾರೆ” ಎಂದು ಕಾಂಗ್ರೆಸ್ ಅಣಕಿಸಿದೆ. ಈ ಅಭಿಯಾನವನ್ನು ಬಿಜೆಪಿಯೇ ಆರಂಭಿಸಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಹೇಳಿದ್ದಾರೆ.

ಚೌಹಾಣ್ ಹಾಗೂ ಕಮಲನಾಥ್ ಅವರ ವಿರುದ್ಧದ ಭ್ರಷ್ಟಾಚಾರ ಆರೋಪದ ಪೋಸ್ಟರ್ ಗಳು ರಾಜಧಾನಿಯಲ್ಲಿ ಕಂಡು ಬಂದಿದ್ದವು. “ಕರಪ್ಟ್ ನಾಥ್” ಎಂಬ ಶೀರ್ಷಿಕೆಯ ಪೋಸ್ಟರ್ ಗಳು ಶಹಾಪುರ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದವು.