ಭೋಪಾಲ್: ಮಧ್ಯಪ್ರದೇಶದ ಮೊರೆನಾ ಪ್ರದೇಶದಲ್ಲಿ ಪೋಷಕರು ಹೇಳಿದ ಹುಡುಗನನ್ನು ಮದುವೆಯಾಗಲು ಹೊರಟ ಪ್ರೇಯಸಿಯನ್ನು ಗುಂಡು ಹಾರಿಸಿ ನಂತರ ಪ್ರಿಯತಮ ನೇಣಿಗೆ ಶರಣಾಗಿದ್ದಾನೆ.
ಉತ್ತರಪ್ರದೇಶ ಝಾನ್ಸಿಯ ದೀಪಕ್ ಗೌತಮ್ ಹಾಗೂ ಮಧ್ಯಪ್ರದೇಶದ ಧಾತಿಯಾ ಜಿಲ್ಲೆಯ ಬರ್ಗಯಾನ್ ಗ್ರಾಮದ ನಿವಾಸಿ ಕಾಜಲ್ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಆದರೆ ಮನೆಯಲ್ಲಿ ಇವರಿಬ್ಬರ ಪ್ರೀತಿಗೆ ಒಪ್ಪಿಗೆ ಇರಲಿಲ್ಲ.
ಹೀಗಾಗಿ ಪರಸ್ಪರ ಪ್ರೀತಿ ಮಾಡುತ್ತಿದ್ದ ಈ ಯುವ ಜೋಡಿ ಮದುವೆಯಾಗಲು ತೀರ್ಮಾನಿಸಿ ಮನೆಯನ್ನು ತೊರೆದಿತ್ತು. ಬಳಿಕ ಅವರನ್ನು ಮನೆಗೆ ಕರೆ ತಂದು ಬುದ್ಧಿ ಹೇಳಲಾಗಿತ್ತು. ಮನೆಗೆ ಬಂದ ಮಗಳಿಗೆ ತಿಳಿ ಹೇಳಿದ ಬಳಿಕ ಮಗಳು ಪೋಷಕರು ಹೇಳಿದ ಹುಡುಗನನ್ನು ಮದುವೆಯಾಗಲು ಒಪ್ಪಿಗೆ ಸೂಚಿಸಿದ್ದಳು.
ಆದರೆ ಪ್ರಿಯಕರ ಗೌತಮ್ಗೆ ಕಾಜಲ್ ನನ್ನು ಮರೆಯಲು ಸಾಧ್ಯವಾಗಿಲ್ಲ. ಹೀಗಾಗಿ ತನ್ನೊಂದಿಗೆ ಬರಲು ಕಾಜಲ್ಗೆ ಒತ್ತಾಯಿಸಿದ್ದಾನೆ. ಆದರೆ ಕಾಜಲ್ ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಬದಲಿಗೆ ಪೋಷಕರು ತೋರಿಸಿದ ಹುಡುಗನನ್ನು ಮದುವೆಯಾಗಲು ನಿರ್ಧರಿಸಿದ್ದಾಳೆ.
ಇದಕ್ಕೆ ಕಾಜಲ್ ಒಪ್ಪದೇ ಇದ್ದಾಗ ಆಕೆಯ ಮೇಲೆ ಗುಂಡಿನ ದಾಳಿ ಮಾಡಿದ್ದಾನೆ. ತನಗೆ ಸಿಗದ ತನ್ನ ಪ್ರೇಯಸಿ ಯಾರಿಗೂ ಕೂಡ ಸಿಗಬಾರದು ಎಂದು ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ಬಳಿಕ ಪರಾರಿಯಾಗಿದ್ದ ಆರೋಪಿಯನ್ನು ಪತ್ತೆ ಮಾಡಲು ಪೊಲೀಸರ ಐದು ತಂಡಗಳು ಶೋಧ ಕಾರ್ಯ ಆರಂಭಿಸಿದ್ದವು. ಪ್ರೇಯಸಿಯನ್ನು ಗುಂಡುಕ್ಕಿ ಹತ್ಯೆ ಮಾಡಿದ ಬಳಿಕ ಮನನೊಂದ ಪ್ರೇಮಿ ಗೌತಮ್ ಕೂಡ ನೇಣಿಗೆ ಶರಣಾಗಿದ್ದಾನೆ.