ಅಹಮದಾಬಾದ್: ಗುಜರಾತ್ ನಲ್ಲಿ ನೂತನ ಸಿಎಂ ಆಯ್ಕೆ ಸಂಬಂಧ ಇಂದು ನಡೆದ ಬಿಎಲ್ ಪಿ ಸಭೆಯಲ್ಲಿ ಭೂಪೇಂದ್ರ ಪಟೇಲ್ ಅವರನ್ನು ಸಿಎಂ ಆಗಿ ಆಯ್ಕೆ ಮಾಡಲಾಗಿದೆ.
ಬಿಜೆಪಿ ವೀಕ್ಷಕರು ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ನರೇಂದ್ರ ಸಿಂಗ್ ತೋಮರ್ ನೂತನ ಸಿಎಂ ಆಯ್ಕೆಯನ್ನು ಘೋಷಿಸಿದರು. ಬಿಎಲ್ ಪಿ ಸಭೆಯಲ್ಲಿ ವಿಜಯ್ ರೂಪಾನಿ ಅವರು ತಮ್ಮ ನಿಲುವು ಸೂಚಿಸಿ ದರು. ಬಳಿಕ ಅಭಿಪ್ರಾಯ ಸಂಗ್ರಹಿಸಲಾಯಿತು. ಸಭೆಯ ನಂತರ ಬಿಜೆಪಿ ಹಿರಿಯ ನಾಯಕರು ಮಹತ್ವದ ಸಭೆ ನಡೆಸಿದರು. ಆ ಬಳಿಕ ನೂತನ ಸಿಎಂ ಹೆಸರನ್ನು ಪ್ರಕಟಿಸಲಾಯಿತು.
ಮುಂಬರುವ ವರ್ಷದ ಕೊನೆಯಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಸಿಎಂ ಬದಲಾವಣೆಗೆ ನಿರ್ಧರಿಸಿತ್ತು. ಗಾಂಧಿ ನಗರದ ಬಿಜೆಪಿ ಕಚೇರಿಯಲ್ಲಿ ಬಿಎಲ್ ಪಿ ಸಭೆಗೂ ಮೊದಲೇ ಕೋರ್ ಕಮಿಟಿ ಸಭೆ ನಡೆಯಿತು. ಬಳಿಕ ನಡೆದ ಬಿಎಲ್ ಪಿ ಸಭೆಯಲ್ಲಿ ಬಿಜೆಪಿ ವೀಕ್ಷಕರಾದ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ನರೇಂದ್ರ ಸಿಂಗ್ ತೋಮರ್ ಪಾಲ್ಗೊಂಡರು.
ಕರ್ನಾಟಕದ ಮಾದರಿಯಲ್ಲೇ ಗುಜರಾತ್ ಸರ್ಕಾರದಲ್ಲೂ ಬದಲಾವಣೆ ಮಾಡುವ ಸಾಧ್ಯತೆ ಇದ್ದು, ಎರಡು ಡಿಸಿಎಂ ಹುದ್ದೆ ಸೃಷ್ಟಿಸುವ ನಿರೀಕ್ಷೆ ಇದೆ. ಸಿಎಂ ಸ್ಥಾನಕ್ಕೆ ಡಿಸಿಎಂ ಆಗಿರುವ ನಿತಿನ್ ಪಟೇಲ್, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಪಟೇಲ್, ರಾಜ್ಯ ಸಚಿವ ಆರ್. ಸಿ.ಫಲ್ದು ಮತ್ತು ಬಿಜೆಪಿ ಗುಜರಾತ್ ರಾಜ್ಯ ಮುಖ್ಯಸ್ಥ ಸಿ.ಆರ್.ಪಾಟೀಲ್ ಅವರ ಹೆಸರು ಕೇಳಿಬಂದಿತ್ತು.
ಬಿಜೆಪಿ ಮತ್ತು ಆರ್ಎಸ್ಎಸ್ ವಲಯದಲ್ಲಿ ಗುಜರಾತ್ನ ಬಿಜೆಪಿ ಉಪಾಧ್ಯಕ್ಷ ಗೋರ್ಧನ್ ಜಡಾಫಿಯಾ ಮತ್ತು ಬಿಜೆಪಿ ರಾಜ್ಯಸಭಾ ಸದಸ್ಯ ಪರಶೋತ್ತಮ್ ರುಪಾಲಾ ಅವರ ಹೆಸರು ಪ್ರಸ್ತಾಪವಾಗಿತ್ತು.
ಭೂಪೇಂದ್ರ ಪಟೇಲ್: 2017 ರಲ್ಲಿ ಮೊದಲ ಬಾರಿಗೆ ಭೂಪೇಂದ್ರ ಪಟೇಲ್ ಘಟ್ಲೋಡಿಯಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬರೋಬ್ಬರಿ 1,17,000 ಮತಗಳ ಅಂತರದಿಂದ ಜಯಗಳಿಸಿದ್ದರು. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಭೂಪೇಂದ್ರ ಪಟೇಲ್ ಅವರು ಗುಜರಾತ್ ನ 17ನೇ ಮುಖ್ಯಮಂತ್ರಿಯಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
1.17 ಲಕ್ಷ ಮತಗಳ ಅಂತರದಿಂದ ಆನಂದಿಬೆನ್ ಅವರ ಘಟ್ಲೋಡಿಯಾ ಕ್ಷೇತ್ರದಿಂದ ಜಯಗಳಿಸಿದ್ದ ಭೂಪೇಂದ್ರ ಪಟೇಲ್ ಇಂಜಿನಿಯರಿಂಗ್ ಪದವೀಧರ ರಾಗಿದ್ದಾರೆ. ನಿರ್ಗಮಿತ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಭೂಪೆಂದ್ರ ಪಟೇಲ್ ಅವರ ಹೆಸರನ್ನು ಸೂಚಿಸಿದರು.