ಅಹ್ಮದಾಬಾದ್: ಗುಜರಾತ್ ನೂತನ ಮುಖ್ಯಮಂತ್ರಿ ಆಗಿ ಆಯ್ಕೆ ಆಗಿರುವ ಭೂಪೇಂದ್ರ ಪಟೇಲ್ ಸೆ.13ರಂದು ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಲಿ ದ್ದಾರೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ.
ಸೋಮವಾರ ಮಧ್ಯಾಹ್ನ 2 ಗಂಟೆ 20 ನಿಮಿಷಕ್ಕೆ ಭೂಪೇಂದ್ರ ಪಟೇಲ್ ಪದಗ್ರಹಣ ಮಾಡಲಿದ್ದಾರೆ ಎಂದು ರಾಜ್ಯಪಾಲ ಆಚಾರ್ಯ ದೇವವ್ರತ್ ಟ್ವೀಟ್ ಮಾಡಿದ್ದಾರೆ. ಅನಿರೀಕ್ಷಿತ ರಾಜಕೀಯ ಬೆಳವಣಿಗೆಯೊಂದರಲ್ಲಿ 59 ವರ್ಷದ ಭೂಪೇಂದ್ರ ಪಟೇಲ್ ರಾಜ್ಯದ ನೂತನ ಮುಖ್ಯಮಂತ್ರಿ ಆಗಿ ಆಯ್ಕೆ ಆಗಿದ್ದಾರೆ.
ಭಾನುವಾರ ಗಾಂಧಿನಗರದ ಭಾರತೀಯ ಜನತಾ ಪಕ್ಷದ ಶಾಸಕಾಂಗ ಸಭೆಯಲ್ಲಿ ನಡೆದ ಸುದೀರ್ಘ ಚರ್ಚೆ ಬಳಿಕ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅಧಿಕೃತವಾಗಿ ನೂತನ ಮುಖ್ಯಮಂತ್ರಿ ಹೆಸರು ಘೋಷಿಸಿದ್ದಾರೆ. ಬೆನ್ನಲ್ಲೇ ಘಟ್ಲೋಡಿಯಾ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ ಭೂಪೇಂದ ಪಟೇಲ್ ರಿಗೆ ಅದ್ಧೂರಿ ಸ್ವಾಗತ ಕೋರ ಲಾಯಿತು.
ಉತ್ತರ ಪ್ರದೇಶದ ಗವರ್ನರ್ ಮತ್ತು ಗುಜರಾತ್ ಮಾಜಿ ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ಆಪ್ತರು. ಗುಜರಾತ್ ನ ಘಟ್ಲೋಡಿಯಾದ ಮೊದಲ ಬಾರಿಗೆ ಶಾಸಕರಾಗಿದ್ದು, 2017ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಶಶಿಕಾಂತ್ ಪಟೇಲ್ ವಿರುದ್ಧ 1 ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದಿದ್ದರು.
ಈ ಹಿಂದೆ ಅಹಮದಾಬಾದ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು ಮತ್ತು ಅಮದವಾಡ್ ಮುನ್ಸಿಪಲ್ ಕಾರ್ಪೊರೇಶನ್ ಸ್ಥಾಯಿ ಸಮಿತಿಯ ನೇತೃತ್ವ ವಹಿಸಿದ್ದರು. ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ಅವರ 2017 ರ ಚುನಾವಣಾ ಪತ್ರಿಕೆಗಳಲ್ಲಿ 5 ಕೋಟಿಗೂ ಹೆಚ್ಚು ಆಸ್ತಿ ಘೋಷಿಸಿದ್ದಾರೆ.
ಅವರು ಪಟೇಲ್ ಅಥವಾ ಪಾಟಿದಾರ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಭೂಪೇಂದ್ರ ಪಟೇಲ್ ಅವರು ಪಕ್ಷದ ಅಚ್ಚರಿಯ ನಿರ್ಧಾರವಾಗಿದ್ದು ಅವರನ್ನು ಪ್ರಮುಖ ಸ್ಪರ್ಧಿಗಳ ಪಟ್ಟಿಯಲ್ಲಿ ಸೇರಿಸಿರಲಿಲ್ಲ.