Monday, 25th November 2024

ಬಿಹಾರ ಸಿಎಂ ಆಗಿ ನಿತೀಶ್​ಕುಮಾರ್​ ಅಧಿಕಾರ ಸ್ವೀಕಾರ ಇಂದು

ಪಟ್ನಾ: ಎನ್‌ಡಿಎ ಜತೆಗಿನ ಮೈತ್ರಿ ತೊರೆದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಿತೀಶ್​ಕುಮಾರ್​ ಅವರೇ ಪುನಃ ಮುಖ್ಯಮಂತ್ರಿಯಾಗಿ ಬುಧವಾರ ಸಂಜೆ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಮೂಲಕ ನಿತೀಶ್​, ಎಂಟನೇ ಬಾರಿಗೆ ಸಿಎಂ ಹುದ್ದೆ ಏರುವ ಮೂಲಕ ದಾಖಲೆ ಬರೆಯಲಿದ್ದಾರೆ.

ಉಪಮುಖ್ಯಮಂತ್ರಿಯಾಗಿ ತೇಜಸ್ವಿ ಯಾದವ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆರ್‌ಜೆಡಿ, ಕಾಂಗ್ರೆಸ್‌ ಸೇರಿ ಇತರ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚನೆಯಾಗುತ್ತಿದೆ. ಇವರಿಬ್ಬರ ಜತೆಗೆ 3 – 5 ಸಚಿವರು ಕೂಡ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಮಧ್ಯಾಹ್ನ ಪಟ್ನಾದ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ರಾಜ್ಯಪಾಲ ಫಾಗು ಚೌಹಾಣ್‌ ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

2000ನೇ ಸಾಲಿನಲ್ಲಿ ಎನ್‌ಡಿಎ ನೇತೃತ್ವದಲ್ಲಿ ನಿತೀಶ್​ ಕುಮಾರ್​ ಪ್ರಥಮವಾಗಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆದರೆ ಈ ಸರ್ಕಾರ ಇದ್ದುದು ಒಂದು ವಾರ ಮಾತ್ರ!

2005ರ ಚುನಾವಣೆಯಲ್ಲಿ ಮೈತ್ರಿಕೂಟ ಜಯ ಸಾಧಿಸಿದ ನಂತರ ನಿತೀಶ್​ಕುಮಾರ್​ ಮತ್ತೆ ಮುಖ್ಯಮಂತ್ರಿಯಾದರು. 2010ರಲ್ಲಿಯೂ ಎನ್‌ಡಿಎ ಭರ್ಜರಿ ಜಯಸಾಧಿಸಿ ಪುನಃ ನಿತೀಶ್​ ಕುಮಾರ್​ 3ನೇ ಬಾರಿ ಸಿಎಂ ಆದರು.

2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಜೆಡಿಯು ಪರಾಭವಗೊಂಡಿತು. ಈ ಸೋಲಿನ ಹೊಣೆಯನ್ನು ಹೊತ್ತುಕೊಂಡ ನಿತೀಶ್​ಕುಮಾರ್​ ರಾಜೀನಾಮೆ ನೀಡಿದರು. ಆದರೆ 2015ರಲ್ಲಿ ಆರ್‌ಜೆಡಿ ಹಾಗೂ ಕಾಂಗ್ರೆಸ್‌ ಬೆಂಬಲದ ಮಹಾಘಟಬಂಧನದಲ್ಲಿ 4ನೇ ಬಾರಿ ಮುಖ್ಯಮಂತ್ರಿ ಹುದ್ದೆ ಏರಿದರು.

2017ರಲ್ಲಿ ಮಹಾಘಟಬಂಧನ ಸರ್ಕಾರಕ್ಕೆ ರಾಜೀನಾಮೆ ನೀಡಿ ಮರುದಿನವೇ ಬಿಜೆಪಿ ಬೆಂಬಲದೊಂದಿಗೆ ಮತ್ತೆ ಸಿಎಂ ಆದರು. 2020ರ ನವೆಂಬರ್​ನಲ್ಲಿ ನಡೆದ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದಲ್ಲಿ ಪುನಃ ಈ ಹುದ್ದೆ ಏರಿದರು. ಈಗ ಮತ್ತೆ ಮುನಿಸುಕೊಂಡು ರಾಜೀನಾಮೆ ನೀಡಿದ್ದಾರೆ. 8ನೇ ಬಾರಿಗೆ ಸಿಎಂ ಆಗಲು ಸನ್ನದ್ಧರಾಗಿದ್ದಾರೆ.