Thursday, 12th December 2024

ಬಿಹಾರ ಚುನಾವಣೆ: ನಾಳೆ 1207 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರ

ಪಾಟ್ನಾ: ಹೈವೋಲ್ಟೇಜ್ ಬಿಹಾರ ವಿಧಾನಸಭೆ ಚುನಾವಣೆಯ ಮೂರನೆ ಮತ್ತು ಕೊನೆ ಹಂತಕ್ಕೆ ನಾಳೆ ಮತದಾನ ನಡೆಯಲಿದೆ.

ಈ ಹಂತದ ಚುನಾವಣೆಯಲ್ಲಿ 1,207 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. ಎನ್‍ಡಿಎ ಮತ್ತು ಮಹಾಘಟ ಬಂಧನ್ ಮೈತ್ರಿಕೂಟಕ್ಕೆ ಇದು ನಿರ್ಣಾಯಕ ಹಂತದ ಚುನಾವಣೆಯಾಗಿದೆ.

ಉತ್ತರ ಬಿಹಾರ ಮತ್ತು ಸೀಮಾಂಚಲ ಪ್ರಾಂತ್ಯದ 16 ಜಿಲ್ಲೆಗಳ 78 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಮತದಾನ ನಡೆಯಲಿದ್ದು, ಸಂಜೆ 6ರ ತನಕ ಮುಂದುವರಿಯಲಿದೆ. ದಿವಂಗತ ಮುಖಂಡ ಶರದ್ ಯಾದವ್ ಅವರ ಪುತ್ರಿ ಸುಹಾಸಿನಿ ಯಾದವ್ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಮಂತ್ರಿಮಂಡಲದ ಎಂಟು ಸಚಿವರ ಭವಿಷ್ಯ ನಾಳೆ ನಿರ್ಧಾರವಾಗಲಿದೆ.

243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ಮೂರನೇ ಅಂತದಲ್ಲಿ 78 ಕ್ಷೇತ್ರಗಳಲ್ಲಿ ಮತದಾನವಾಗಲಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ.

ಬಿಹಾರದ 17 ಜಿಲ್ಲೆಗಳ 94 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 3ರಂದು ಎರಡನೇ ಹಂತ ಚುನಾವಣೆ ನಡೆದಿತ್ತು. ಅ.28ರಂದು ನಡೆದ ಮೊದಲ ಹಂತದಲ್ಲಿ 16 ಜಿಲ್ಲೆಗಳ 71 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆದಿತ್ತು. ಮೊದಲ ಮತ್ತು ಎರಡನೇ ಹಂತದ ಚುನಾವಣೆಗಳಲ್ಲಿ ಸರಾಸರಿ ಶೇ.54ರಷ್ಟು ಮತದಾನವಾಗಿತ್ತು. 243 ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ನ.10ರಂದು ಪ್ರಕಟವಾಗಲಿದೆ.