Friday, 20th September 2024

ಬಿಹಾರ ವಿಧಾನಸಭೆ ಚುನಾವಣೆ: ಮೂರು ಹಂತದಲ್ಲಿ ಮತದಾನ

ನವದೆಹಲಿ: ಬಿಹಾರ ವಿಧಾನಸಭೆಯ ಅವಧಿ ಮುಂದಿನ ನ. 29ರಂದು ಅಂತ್ಯಗೊಳ್ಳುತ್ತಿದೆ. 243 ಸದಸ್ಯ ಬಲ ಇರುವ ವಿಧಾನಸಭೆಯಲ್ಲಿ 38 ಸೀಟುಗಳು ಪರಿಶಿಷ್ಟ ಜಾತಿ ಮತ್ತು ಎರಡು ಸೀಟುಗಳನ್ನು ಪರಿಶಿಷ್ಟ ಪಂಗಡಗಳಿಗೆ ಮೀಸಲಿರಿಸಲಾಗಿದೆ.

ಭಾರತ ಮೊದಲ ವಿಧಾನಸಭೆ ಚುನಾವಣೆಗೆ ಸಜ್ಜಾಗಿದೆ. ಬಿಹಾರ ರಾಜ್ಯದ ವಿಧಾನಸಭೆ ಚುನಾವಣೆಗೆ ಇಂದು ರಾಷ್ಟ್ರೀಯ ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡಿದೆ. ಚುನಾವಣಾ ಆಯೋಗ ಮುಖ್ಯಸ್ಥ ಸುನೀಲ್ ಅರೋರಾ ಬಿಹಾರ ಚುನಾವಣಾ ದಿನಾಂಕವನ್ನು ಪ್ರಕಟಪಡಿಸಿದರು.

ಅಕ್ಟೋಬರ್ 28ರಿಂದ ನವೆಂಬರ್ 7ರವರೆಗೆ ಮೂರು ಹಂತಗಳಲ್ಲಿ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಮೊದಲ ಹಂತದ ಚುನಾವಣೆ ಅಕ್ಟೋಬರ್ 28ರಂದು ನಡೆದರೆ, ಎರಡನೇ ಹಂತದ ಚುನಾವಣೆ ನವೆಂಬರ್ 3ರಂದು, ಮೂರನೇ ಹಂತದ ಚುನಾವನೆ ನವೆಂಬರ್ 7ರಂದು ನಡೆಯಲಿದೆ. ಮತಎಣಿಕೆ ಕಾರ್ಯ ನವೆಂಬರ್ 10ರಂದು ನಡೆಯಲಿದೆ.

ಮೊದಲ ಹಂತದಲ್ಲಿ 71 ಕ್ಷೇತ್ರಗಳಿಗೆ, ಎರಡನೇ ಹಂತದಲ್ಲಿ 94 ಕ್ಷೇತ್ರಗಳಿಗೆ ಮತ್ತು ಅಂತಿಮ ಹಂತದಲ್ಲಿ 78 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಮತದಾನಕ್ಕೆ ಒಂದು ಗಂಟೆ ಹೆಚ್ಚು ಅವಕಾಶ ನೀಡಲಾಗಿದ್ದು, ಬೆಳಿಗ್ಗೆ ಏಳು ಗಂಟೆಯಿಂದ ಸಂಜೆ ಅರು ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.

ಕೋವಿಡ್ ಸೋಂಕಿತರಿಗೂ ಅವಕಾಶ: ಕೋವಿಡ್ 19 ಸೋಂಕು ಪಾಸಿಟಿವ್ ಆದವರಿಗೂ ಮತದಾನ ಮಾಡುವ ಅವಕಾಶ ನೀಡಲಾಗುವುದು. ಆದರೆ ದಿನದ ಅಂತಿಮ ಒಂದು ಗಂಟೆಯಲ್ಲಿ ಮತದಾನ ಮಾಡಬಹುದು ಎಂದು ಹೇಳಿದರು.

ಜಾತಿ ಲೆಕ್ಕಾಚಾರದಲ್ಲಿ ನೋಡುವುದಾದರೆ ಬಿಹಾರದಲ್ಲಿ ಬ್ರಾಹ್ಮಣ, ಮುಸ್ಲಿಂ ಮತ್ತು ಕುಶವಾ ಸಮುದಾಯಗಳ ಮತಗಳು ಪ್ರಮುಖ ಪಾತ್ರವಹಿಸುತ್ತದೆ.