Thursday, 12th December 2024

ಬಿಹಾರ ವಿಧಾನಸಭಾ ಚುನಾವಣೆ: ಈವರೆಗೂ ಶೇ.7.1ರಷ್ಟು ಮತದಾನ

ಪಾಟ್ನಾ: ಬಿಹಾರ ರಾಜ್ಯ ವಿದಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಬುಧವಾರ ಆರಂಭವಾಗಿದ್ದು, ಈವರೆಗೂ ಶೇ.7.1ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.

ಬಿಹಾರ ರಾಜ್ಯದ 243 ವಿಧಾನಸಭಾ ಕ್ಷೇತ್ರಗಳಿಗೆ 3 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಹಂತದಲ್ಲಿ 71 ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ಸುಮಾರು 2 ಕೋಟಿಗೂ ಅಧಿಕ ಮತದಾರರು ಒಟ್ಟು 1066 ಅಭ್ಯರ್ಥಿಗಳ ಭವಿಷ್ಯ ಬರೆ ಯಲಿದ್ದಾರೆ.

ಕೊರೋನಾ ಸಾಂಕ್ರಾಮಿಕ ರೋಗ ಆರಂಭವಾದ ಬಳಿಕ ನಡೆಯುತ್ತಿರುವ ಚುನಾವಣೆ ಇದಾಗಿದ್ದು, ಮತದಾನ ಆರಂಭಕ್ಕೂ ಮುನ್ನ ಮತಗಟ್ಟೆಗಳಲ್ಲಿ ಸೋಂಕು ನಿವಾರಕ ಸಿಂಪಡಿಸಲಾಗಿದೆ.

ಮೊದಲ ಹಂತದ 71 ಕ್ಷೇತ್ರಗಳ ಪೈಕಿ ಬಹುತೇಕ ನಕ್ಸಲ್‌ ಪೀಡಿತ ಮಗಧ, ಶಾಬಾದ್‌ ಮತ್ತು ಮುಂಗೇರ್‌ ಪ್ರದೇಶಕ್ಕೆ ಸೇರಿವೆ. ನಕ್ಸಲ್‌ ಬಾಧಿತ ಪ್ರದೇಶದಲ್ಲಿ ಮತದಾನಕ್ಕಾಗಿ ವ್ಯಾಪಕ ಬಂದೋಬಸ್ತ್‌ ಮಾಡಲಾಗಿದೆ. ಔರಂಗಬಾದ್‌ನ ಢಿಬ್ರಾ ಪ್ರದೇಶದಲ್ಲಿ ಎರಡು ಸುಧಾರಿತ ಸ್ಫೋಟಕಗಳನ್ನು ಪತ್ತೆ ಮಾಡಿರುವ ಸಿಆರ್‌ಪಿಎಫ್‌, ಅವುಗಳನ್ನು ನಿಷ್ಕ್ರಿಯಗೊಳಿಸಿದೆ.

ಸತತ 4ನೇ ಅವಧಿಗೂ ಮುಖ್ಯಮಂತ್ರಿ ಹುದ್ದೆ ಉಳಿಸಿಕೊಳ್ಳಲು ಬಯಸಿರುವ ನಿತೀಶ್‌ ಕುಮಾರ್‌ ಅವರಿಗೆ ಆರ್‌ಜೆಡಿಯ ತೇಜಸ್ವಿ ಯಾದವ್‌ ಭಾರಿ ಸ್ಪರ್ಧೆ ಒಡ್ಡಿದ್ದಾರೆ. ‘ಚುನಾವಣೆಯು ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬವಾಗಿದೆ. ಪ್ರತಿಯೊಬ್ಬರೂ ಮತ ದಾನದ ಹಕ್ಕು ಕೈಗೊಳ್ಳುವಂತೆ ಕೋರುತ್ತೇನೆ’ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.

ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಅವರು ಮತದಾನಕ್ಕೂ ಮುನ್ನ ಲಖಿಸರಾಯಿಯಲ್ಲಿ ದೇವಾಲಯಕ್ಕೆ ಭೇಟಿ ನೀಡಿದ್ದು, ಪೂಜೆ ಸಲ್ಲಿಸಿದ್ದಾರೆ.