Friday, 20th September 2024

ಶರಣಾಗತಿಗೆ ಕಾಲಾವಕಾಶ ಕೋರಿದ ಅರ್ಜಿ ತಿರಸ್ಕೃತ

ನವದೆಹಲಿ: ಶರಣಾಗತಿಗೆ ಕಾಲಾವಕಾಶ ಕೋರಿ ಬಿಲ್ಕಿಸ್ ಬಾನೊ ಪ್ರಕರಣದ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಭಾನುವಾರದ ಒಳಗೆ ಶರಣಾಗುವಂತೆ ಸೂಚನೆ ನೀಡಿದೆ.
ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರ ನೇತೃತ್ವದ ಪೀಠವು ಅರ್ಜಿ ವಿಚಾರಣೆ ನಡೆಸಿತು. ಕುಟುಂಬದವರ ವಿವಾಹ, ಪೋಷಕರ ಜವಾಬ್ದಾರಿ ಕಾರಣ ನೀಡಿ ಸಲ್ಲಿಸಿರುವ ಅರ್ಜಿಗಳನ್ನು ಕೋರ್ಟ್ ಪರಿಗಣಿಸಿಲ್ಲ, ಪ್ರಕರಣದ 11 ಅಪರಾಧಿಗಳು ಅಧಿಕಾರಿಗಳ ಮುಂದೆ ಶರಣಾಗುವಂತೆ ತಿಳಿಸಿದೆ. ಎಲ್ಲಾ ಆರೋಪಿಗಳು ಜನವರಿ 21 ರೊಳಗೆ ಶರಣಾಗುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಬಿಲ್ಕಿಸ್ ಬಾನೊ ಪ್ರಕರಣದ ಅಪರಾಧಿಗಳು ತಮ್ಮ ಸ್ವಂತ ಆರೋಗ್ಯ ಮತ್ತು ತಮ್ಮ ವೃದ್ಧ ತಂದೆ ತಾಯಿ ಸೇರಿದಂತೆ ಹಲವು ಕೌಟುಂಬಿಕ ಜವಾಬ್ದಾರಿ ಗಳನ್ನು ಸುಪ್ರೀಂ ಕೋರ್ಟ್ನಲ್ಲಿ ಉಲ್ಲೇಖಿಸಿದ್ದರು. 2002 ರ ಗುಜರಾತ್ ಗಲಭೆಯಲ್ಲಿ ಬಿಲ್ಕಿಸ್ ಬಾನೋ ಅವರ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದ ಏಳು ಸದಸ್ಯರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಈ ಎಲ್ಲಾ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ಶರಣಾಗಲು ಸಮಯ ಕೋರಿ ಸಲ್ಲಿಸಿದ್ದ ಅಪರಾಧಿಗಳು, ವಿವಿಧ ಕಾರಣಗಳನ್ನು ನೀಡಿದ್ದರು. ವೃದ್ಧ ತಂದೆ ತಾಯಿ ತಮ್ಮನ್ನು ಅವಲಂಬಿಸಿದ್ದು, ಬೆಳೆದು ನಿಂತಿರುವ ಬೆಳೆಯನ್ನು ಕಟಾವು ಮಾಡಬೇಕು ಎಂದು ಒಬ್ಬ ಅಪರಾಧಿ ಹೇಳಿದ್ದರೆ, ಮತ್ತೊಬ್ಬ ಅಪರಾಧಿ ತನ್ನ ಮಗನ ಮದುವೆ ಕಾರ್ಯ ಇರುವು ದರಿಂದ ಹೆಚ್ಚುವರಿ ಸಮಯ ನೀಡುವಂತೆ ಕೋರಿದ್ದ.

ಆದರೆ ಇದಾವುದೂ, ಶರಣಾಗತಿ ಮನವಿಯನ್ನು ಪುರಸ್ಕರಿಸಲು ಅರ್ಹ ಕಾರಣಗಳಲ್ಲ ಎಂದು ನ್ಯಾಯಪೀಠ ಹೇಳಿದೆ.